ಉದಯವಾಹಿನಿ, ಉಡುಪಿ: ಏಷ್ಯಾದಲ್ಲೇ ಅತಿ ದೊಡ್ಡ ಸರ್ವ ಋತು ಮೀನುಗಾರಿಕೆ ಬಂದರು ಎಂಬ ಹೆಗ್ಗಳಿಕೆಗೆ ಪಾತ್ರವಾಗಿರುವ ಮಲ್ಪೆಯ ಬಂದರಿನಲ್ಲಿ ಭದ್ರತೆ ಎನ್ನುವುದು ಮರೀಚಿಕೆಯಾಗಿದೆ. ನೂರಾರು ಕಾರ್ಮಿಕರು ಕೆಲಸ ನಿರ್ವಹಿಸುವ, ದಿನ ನಿತ್ಯ ಲಕ್ಷಾಂತರ ರೂಪಾಯಿಗಳ ವ್ಯವಹಾರ ನಡೆಯುವ ಈ ಬಂದರಿನಲ್ಲಿ ಪ್ರಮುಖವಾದ ಸ್ಥಳಗಳಲ್ಲಿ ಸಿ.ಸಿ.ಟಿ.ವಿ ಕ್ಯಾಮೆರಾ ಕಣ್ಗಾವಲು ಕೂಡ ಇಲ್ಲ.
ಈಚೆಗೆ ಮಲ್ಪೆ ಪರಿಸರದಿಂದ ಪೊಲೀಸರು ಏಳು ಮಂದಿ ಬಾಂಗ್ಲಾದೇಶದ ಪ್ರಜೆಗಳನ್ನು ಬಂಧಿಸಿದ ಬಳಿಕ ಬಂದರಿನ ಸುರಕ್ಷತೆ ಕುರಿತ ಚರ್ಚೆ ಮತ್ತೆ ಮುನ್ನೆಲೆಗೆ ಬಂದಿದೆ.ಈ ಬಂದರಿನಲ್ಲಿ ಕೆಲಸ ಮಾಡುವ ಬಹುತೇಕರು ಉತ್ತರ ಭಾರತೀಯರು. ಬಲೆ ದುರಸ್ತಿ, ಬೋಟ್‌ಗಳಲ್ಲಿ ತೆರಳಿ ಮೀನುಗಾರಿಕೆ ನಡೆಸುವುದು, ಬಂದರು ಸಮೀಪದ ಐಸ್ ಫ್ಯಾಕ್ಟರಿ, ಫಿಶ್‌ಮಿಲ್‌ಗಳಲ್ಲೂ ಉತ್ತರ ಭಾರತೀಯ ಕಾರ್ಮಿಕರೇ ಕಾಣ ಸಿಗುತ್ತಾರೆ.ಒಡಿಶಾ, ಪಶ್ಚಿಮ ಬಂಗಾಳ, ಉತ್ತರಪ್ರದೇಶ ಸೇರಿದಂತೆ ವಿವಿಧ ರಾಜ್ಯಗಳ ಕಾರ್ಮಿಕರು ಈ ಬಂದರಿಗೆ ಕಾಯಕ ಅರಸಿ ಬರುತ್ತಾರೆ. ಉತ್ತರ ಭಾರತದ ಕಾರ್ಮಿಕರು ಬಂದು ಹೋಗುತ್ತಿರುವುದರಿಂದ ಅವರ ಕುರಿತ ದತ್ತಾಂಶಗಳನ್ನು ಸಂಗ್ರಹಿಸುವುದು ಕೂಡ ಸವಾಲಾಗಿದೆ ಎನ್ನುತ್ತಾರೆ ಅಧಿಕಾರಿಗಳು.
ಬೇರೆಡೆಯಿಂದ ಇಲ್ಲಿಗೆ ಕೆಲಸಕ್ಕೆ ಬರುವ ಕಾರ್ಮಿಕರಿಗೆ ನಕಲಿ ಆಧಾರ್‌ಕಾರ್ಡ್ ಸೇರಿದಂತೆ ನಕಲಿ ದಾಖಲೆಗಳನ್ನು ಸೃಷ್ಟಿಸಿ ಕೊಡುವ ಜಾಲಗಳು ಕೂಡ ಸಕ್ರಿಯವಾಗಿದೆ ಎಂಬ ಮಾತುಗಳೂ ಕೇಳಿ ಬಂದಿವೆ.ಸಾವಿರಾರು ಜನ ಭೇಟಿ ನೀಡುವ ಈ ಮೀನುಗಾರಿಕಾ ಬಂದರಿಗೆ ಹೆಚ್ಚಿನ ಸಂಖ್ಯೆಯಲ್ಲಿ ಭದ್ರತಾ ಸಿಬ್ಬಂದಿ ನೇಮಿಸಬೇಕೆಂಬುದು ಸ್ಥಳೀಯ ಮೀನುಗಾರರ ಆಗ್ರಹವಾಗಿದೆ.ಈ ಬಂದರನ್ನು ಪ್ರವೇಶಿಸಲು ಹಲವು ರಸ್ತೆಗಳು ಇರುವುದರಿಂದ ಯಾರು ಬೇಕಾದರೂ ಬರಬಹುದಾಗಿದೆ. ಎಲ್ಲಿಯೂ ಭದ್ರತಾ ಸಿಬ್ಬಂದಿ ಕಣ್ಣಿಗೆ ಬೀಳುವುದಿಲ್ಲ. ಇನ್ನು ಮಳೆಗಾಲದ ಎರಡು ತಿಂಗಳು ಈ ಬಂದರಿನಲ್ಲಿ ಎಲ್ಲಾ ಬೋಟ್‌ಗಳು ಲಂಗರು ಹಾಕುತ್ತವೆ. ಲಕ್ಷಾಂತರ ಮೌಲ್ಯದ ಬೋಟ್‌ಗಳನ್ನು ನಿಲ್ಲಿಸುವುದರಿಂದ ಈ ಸಂದರ್ಭದಲ್ಲಿ ಬಂದರಿಗೆ ಹೆಚ್ಚಿನ ಭದ್ರತೆ ಒದಗಿಸಬೇಕೆಂದು ಪ್ರತಿ ವರ್ಷವೂ ಮೀನುಗಾರರು ಆಗ್ರಹಿಸುತ್ತಾರೆ.
ಮಲ್ಪೆ ಬಂದರಿಗೆ ಆಗಾಗ ಹೊರ ರಾಜ್ಯಗಳ ಬೋಟ್‌ಗಳೂ ಬರುತ್ತವೆ. ಹವಾಮಾನ ವೈಪರೀತ್ಯವಾಗುವ ಸಂದರ್ಭದಲ್ಲಿ ಕೇರಳ, ತಮಿಳುನಾಡು ಸೇರಿದಂತೆ ಹಲವು ರಾಜ್ಯಗಳ ಬೋಟ್‌ಗಳು ಇಲ್ಲಿಗೆ ಬಂದು ಲಂಗರು ಹಾಕುತ್ತವೆ ಎನ್ನುತ್ತಾರೆ ಮಲ್ಪೆಯ ಸ್ಥಳೀಯ ಮೀನುಗಾರರು.
