ಉದಯವಾಹಿನಿ, ಬ್ರಹ್ಮಾವರ: ‘ಯಾವುದೇ ಫಲಾಪೇಕ್ಷೆಯಿಲ್ಲದೆ, ಸರ್ಕಾರಿ ವ್ಯವಸ್ಥೆಗಳಿಂದ ದೂರವಿದ್ದು ಸಮಾಜ ಸೇವೆಯನ್ನು ಗ್ರಾಮಾಭಿವೃದ್ಧಿ ಯೋಜನೆ ಮಾಡುತ್ತಿದೆ. ಇದರಿಂದ ಜನರು ಸಂತುಷ್ಟಿ ಜೀವನ ನಡೆಸುತ್ತಿದ್ದಾರೆ’ ಎಂದು ಬ್ರಹ್ಮಾವರ ತಾಲ್ಲೂಕು ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆಯ ಕೋಶಾಧಿಕಾರಿ ರಾಜೀವ ಕುಲಾಲ ಹೇಳಿದರು.
ಬ್ರಹ್ಮಾವರ ನಾರಾಯಣಗುರು ಸಭಾಭವನದಲ್ಲಿ ಭಾನುವಾರ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ. ಟ್ರಸ್ಟ್ ಬ್ರಹ್ಮಾವರ ತಾಲ್ಲೂಕು ಮತ್ತು ಬ್ಯಾಂಕ್ ಆಫ್ ಬರೋಡ ಸಹಯೋಗದಲ್ಲಿ ನಡೆದ ತಾಲ್ಲೂಕು ಮಟ್ಟದ ಒಕ್ಕೂಟ ಪದಾಧಿಕಾರಿಗಳ ಸಮಾವೇಶದಲ್ಲಿ ಅವರು ಮಾತನಾಡಿದರು.
‘ಸಂಘ-ಸಂಸ್ಥೆಗಳಲ್ಲಿ ಪದಾಧಿಕಾರಿಗಳ ಜವಾಬ್ದಾರಿ ಹೆಚ್ಚಿರುತ್ತದೆ. ಈ ಜವಾಬ್ದಾರಿಯಿಂದ ಕೆಲಸ ನಿಯಮಬದ್ಧವಾಗಿ, ಪ್ರಾಮಾಣಿಕವಾಗಿ ನಡೆಯುತ್ತಿದೆ’ ಎಂದರು.
ಅಧ್ಯಕ್ಷತೆ ವಹಿಸಿ ಮಾತನಾಡಿದ ಬ್ರಹ್ಮಾವರ ತಾಲ್ಲೂಕು ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆ ಅಧ್ಯಕ್ಷ ಪ್ರಕಾಶ ಶೆಟ್ಟಿ, ‘ಯೋಜನೆಗಳ ಸವಲತ್ತು ಮತ್ತು ಸೌಕರ್ಯಗಳ ಬಗ್ಗೆ ಪದಾಧಿಕಾರಿಗಳು ಪ್ರತಿಯೊಬ್ಬ ಸದಸ್ಯನಿಗೂ ತಿಳಿಸುವ ಕಾರ್ಯ ಮಾಡುತ್ತಿರುವುದು ಶ್ಲಾಘನೀಯ’ ಎಂದರು.
ಬ್ಯಾಂಕ್ ಆಫ್ ಬರೋಡ ಬ್ರಹ್ಮಾವರ ಶಾಖೆಯ ಪ್ರಬಂಧಕ ಸಕಾರಾಮ್, ಸ್ವ-ಸಹಾಯ ಸಂಘಗಳು ಬ್ಯಾಂಕಿಗೆ ನೀಡಬೇಕಾದ ದಾಖಲಾತಿ ಮತ್ತು ಬ್ಯಾಂಕ್ ಪ್ರತಿನಿಧಿಯಾಗಿ ಎಸ್.ಕೆ.ಡಿ.ಆರ್.ಪಿ ನಿರ್ವಹಿಸುತ್ತಿರುವ ಜವಾಬ್ದಾರಿಗಳ ಬಗ್ಗೆ ತಿಳಿಸಿದರು.ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ.ಟ್ರಸ್ಟ್ ಉಡುಪಿ ಜಿಲ್ಲೆಯ ನಿರ್ದೇಶಕ ನಾಗರಾಜ ಶೆಟ್ಟಿ, ದಶಾಂಶಗಳು ಹಾಗೂ ಯೋಜನೆಯ ಸ್ವ-ಸಹಾಯ ಸಂಘಗಳ ವ್ಯವಸ್ಥೆ ಕುರಿತು ತಿಳಿಸಿದರು. ಬ್ರಹ್ಮಾವರ ತಾಲ್ಲೂಕು ಯೋಜನಾಧಿಕಾರಿ ರಮೇಶ ಪಿ.ಕೆ, ಯೋಜನೆಯ ವಿವಿಧ ಕಾರ್ಯಕ್ರಮ ಮತ್ತು ತಾಲ್ಲೂಕಿನ ಸಾಧನೆಯ ಸಂಕ್ಷಿಪ್ತ ವರದಿ ಮಾಹಿತಿ ನೀಡಿದರು.
