ಉದಯವಾಹಿನಿ, ಯಾದಗಿರಿ: ನಗರಸಭೆ ವ್ಯಾಪ್ತಿಯ ರಸ್ತೆಗಳಲ್ಲಿ ಬಿದ್ದಿದ್ದ ಗುಂಡಿಗಳನ್ನು ತಾತ್ಕಾಲಿಕವಾಗಿ ಮುಚ್ಚಿದ್ದು, ಕೊಂಚ ಮಟ್ಟಿಗೆ ನಗರ ನಿವಾಸಿಗಳಿಗೆ ಓಡಾಡಲು ಅನುಕೂಲವಾಗಿದೆ.ಈ ಬಾರಿ ಮುಂಗಾರು, ಹಿಂಗಾರು ಮಳೆ ಅಬ್ಬರಿಸಿದ್ದು, ಇದರಿಂದ ನಗರ ವಿವಿಧೆಡೆ ಗುಂಡಿಗಳ ಕಾರುಬಾರು ನಡೆದಿತ್ತು.ಮುಂಗಾರು ಮುಗಿದರೂ ಗುಂಡಿಗಳನ್ನು ಅಧಿಕಾರಿಗಳು ಮುಚ್ಚದ ಕಾರಣ ಸಾರ್ವಜನಿಕರು ಹಿಡಿಶಾಪ ಹಾಕಿ ಸಂಚಾರ ಮಾಡುತ್ತಿದ್ದರು.ಸಾರ್ವಜನಿಕರು ಪದೇ ಪದೇ ದೂರು ನೀಡಿದ ನಂತರ ನಗರಸಭೆ ಆಡಳಿತ ಯಂತ್ರ ಎಚ್ಚೆತ್ತು ಗುಂಡಿಗಳನ್ನು ಮುಚ್ಚಿಸುವ ಕೆಲಸ ಮಾಡಿದೆ.
ನಗರದ ಮೂಲಕ ಹಾದುಹೋಗುವ ಕಲಬುರಗಿ-ಗುತ್ತಿ ಮತ್ತು ಸಿಂದಗಿ-ಕೊಡಂಗಲ್‌ವರೆಗಿನ ರಾಷ್ಟ್ರೀಯ, ರಾಜ್ಯ ಹೆದ್ದಾರಿ ಹೊರತುಪಡಿಸಿ ನಗರದೊಳಗಿನ ಬಹುತೇಕ ರಸ್ತೆಗಳ ಗುಂಡಿ ಮುಚ್ಚಲಾಗಿದೆ. ಲುಂಬಿನಿ ಕೆರೆ ರಸ್ತೆ, ಮೈಲಾಪುರ ಅಗಸಿ, ಗಂಜ್ ಏರಿಯಾ, ಲಕ್ಷ್ಮೀನಗರ ಹೀಗೇ ಅನೇಕ ಕಡೆ ಗುಂಡಿ ಮುಚ್ಚಲಾಗಿದೆ.
ಕಳೆದ ಒಂದು ವರ್ಷಕ್ಕೂ ಹೆಚ್ಚು ಕಾಲ ಅಧ್ಯಕ್ಷ ಸ್ಥಾನ ಮೀಸಲಾತಿ ಗೊಂದಲದಿಂದ ಖಾಲಿಯಾಗಿತ್ತು. ಇದೇ ಅಕ್ಟೋಬರ್ 3ರಂದು ನಡೆದ ಚುನಾವಣೆಯಲ್ಲಿ ನಗರಸಭೆ ಅಧ್ಯಕ್ಷೆಯಾಗಿ ಲಲಿತಾ ಅನಪುರ ಅವರು ಆಯ್ಕೆಯಾಗಿದ್ದು, ಅವರಿಗೆ ಸಮಸ್ಯೆಗಳ ಸರಮಾಲೆ ಶುರುವಾಗಿತ್ತು.ನಗರದ ರಸ್ತೆಗಳ ದುಸ್ಥಿತಿ ಬಗ್ಗೆ ಆಗಾಗ ಸಾಕಷ್ಟು ದೂರುಗಳು ಬರುತ್ತಿದ್ದವು. ಆದ್ದರಿಂದ ನಗರಸಭೆ ಅನುದಾನದಲ್ಲಿ ಗುಂಡಿಗಳನ್ನು ತುಂಬಿಸಲು ಆರಂಭಿಸಲಾಗಿದೆ.
