ಉದಯವಾಹಿನಿ, ಬೆಂಗಳೂರು: ರೇಣುಕಾಸ್ವಾಮಿ ಕೊಲೆ ಪ್ರಕರಣದ ಪ್ರಮುಖ ಆರೋಪಿ, ನಟ ದರ್ಶನ್ ತೂಗುದೀಪ ಅವರಿಗೆ ಹೈಕೋರ್ಟ್ ನಿಂದ ದೊರೆತಿರುವ ಮಧ್ಯಂತರ ಜಾಮೀನು ತೆರವಿಗೆ ಸುಪ್ರೀಂ ಕೋರ್ಟ್‌ಗೆ ಮೇಲ್ಮನವಿ ಸಲ್ಲಿಸಲು ನಗರ ಪೊಲೀಸರು ಮುಂದಾಗಿದ್ದಾರೆ.
ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಪ್ರಮುಖ ಆರೋಪಿ ನಟ ದರ್ಶನ್‌ಗೆ ದೊರೆತಿರುವ ಮಧ್ಯಂತರ ಜಾಮೀನು ತೆರವಿಗೆ ಮೇಲ್ಮನವಿ ಸಲ್ಲಿಸಲು ಕೇಳಿದ್ದ ಅನುಮತಿಗೆ ರಾಜ್ಯ ಸರ್ಕಾರದ ಒಪ್ಪಿಗೆ ಅನುಮತಿ ದೊರೆತಿದ್ದು, ಸದ್ಯದಲ್ಲೇ ಸುಪ್ರೀಂ ಕೋರ್ಟ್‌ಗೆ ಮೇಲ್ಮನವಿ ಸಲ್ಲಿಸಲಾಗುವುದು ಎಂದು ನಗರ ಪೊಲೀಸ್ ಆಯುಕ್ತ ಬಿ.ದಯಾನಂದ್ ತಿಳಿಸಿದ್ದಾರೆ.
ಚಿತ್ರದುರ್ಗದ ರೇಣುಕಾಸ್ವಾಮಿ ಹತ್ಯೆ ಪ್ರಕರಣದ ಆರೋಪದಡಿ ಬಂಧನಕ್ಕೊಳಗಾಗಿ ೪ ತಿಂಗಳು ಸೆರೆವಾಸ ಅನುಭವಿಸಿದ್ದ ದರ್ಶನ್ ಅವರಿಗೆ ವೈದ್ಯಕೀಯ ಕಾರಣಗಳಿಂದ ೬ ವಾರಗಳ ಕಾಲ ಹೈಕೋರ್ಟ್ ಮಧ್ಯಂತರ ಜಾಮೀನು ನೀಡಿತ್ತು.
ನ್ಯಾಯಮೂರ್ತಿ ಎಸ್.ವಿಶ್ವಜಿತ್ ಶೆಟ್ಟಿ ಅವರಿದ್ದ ಏಕಸದಸ್ಯ ಪೀಠ ಅಕ್ಟೋಬರ್ ೩೦ರಂದು ಷರತ್ತುಬದ್ಧ ಮಧ್ಯಂತರ ಜಾಮೀನು ನೀಡಿ ಬೆನ್ನು ನೋವಿನ ಚಿಕಿತ್ಸೆಗೆ ಆರು ವಾರಗಳ ಕಾಲಾವಕಾಶವನ್ನು ಕೋರ್ಟ್ ನೀಡಿದೆ.
ದರ್ಶನ್‌ಗೆ ಜಾಮೀನು ಸಿಕ್ಕಿ ೧೫ ದಿನಗಳ ಕಳೆದಿವೆ. ಆದರೆ, ಈವರೆಗೆ ಅವರಿಗೆ ಯಾವುದೇ ಶಸ್ತ್ರಚಿಕಿತ್ಸೆ ನೆರವೇರಿಲ್ಲ. ಅವರು ಹೊರಗಿದ್ದಷ್ಟು ದಿನ ಸಾಕ್ಷಿಗಳ ಮೇಲೆ ಪ್ರಭಾವ ಬೀರುವ ಸಾಧ್ಯತೆ ಇದ್ದೇ ಇರುತ್ತದೆ. ಈ ಕಾರಣಕ್ಕೆ ದರ್ಶನ್‌ಗೆ ನೀಡಿದ್ದ ಜಾಮೀನನ್ನು ಪ್ರಶ್ನೆ ಮಾಡಲು ಪೊಲೀಸರು ಮುಂದಾಗಿದ್ದು, ಇದಕ್ಕೆ ಸರ್ಕಾರದಿಂದ ಒಪ್ಪಿಗೆ ಕೂಡ ಸಿಕ್ಕಿದೆ.

Leave a Reply

Your email address will not be published. Required fields are marked *

error: Content is protected !!