ಉದಯವಾಹಿನಿ, ಹಾವೇರಿ: ಜಿಲ್ಲೆ ಹಾಗೂ ಹೊರ ಜಿಲ್ಲೆಗಳಲ್ಲಿ ಕಬ್ಬು ನುರಿಯುವ ಕೆಲಸ ಆರಂಭವಾಗಿದ್ದು, ರೈತರ ಹೊಲಗಳಿಂದ ಕಾರ್ಖಾನೆಗೆ ಕಬ್ಬು ಸಾಗಿಸುವ ವಾಹನಗಳಿಗೆ ರಾಜ್ಯ-ರಾಷ್ಟ್ರೀಯ ಹೆದ್ದಾರಿಗಳಲ್ಲಿ ವಿನಾಯಿತಿ ನೀಡಲಾಗಿದೆ.
ಈ ಬಗ್ಗೆ ಆದೇಶ ಹೊರಡಿಸಿರುವ ಜಿಲ್ಲಾಧಿಕಾರಿ ಡಾ. ವಿಜಯ ಮಹಾಂತೇಶ ದಾನಮ್ಮನವರ, ‘ಕಬ್ಬು ಸಹಿತ ವಾಹನಗಳು, ಟೋಲ್‌ಗೇಟ್‌ಗಳಲ್ಲಿ ಯಾವುದೇ ಶುಲ್ಕ ಪಾವತಿಸದೇ ಓಡಾಡಬಹುದು’ ಎಂದಿದ್ದಾರೆ.
‘ಸಕ್ಕರೆ ಕಾರ್ಖಾನೆಗಳಿಗೆ ಕಬ್ಬು ಸಾಗಿಸುವ ವಾಹನಗಳ ತೂಕ ಹೆಚ್ಚಿರುವುದಾಗಿ ಹೇಳಿ ಟೋಲ್‌ಗೇಟ್‌ನಲ್ಲಿ ಹೆಚ್ಚುವರಿ ಶುಲ್ಕ ವಸೂಲಿ ಮಾಡಲಾಗುತ್ತಿದೆ. ಇದರಿಂದ ರೈತರಿಗೆ ತೊಂದರೆ ಉಂಟಾಗುತ್ತಿದೆ. ಟೋಲ್‌ಗೇಟ್‌ಗಳಲ್ಲಿ ಉಚಿತ ಪ್ರವೇಶಕ್ಕೆ ಅವಕಾಶ ಕಲ್ಪಿಸಿ’ ಎಂದು ಆರೋಪಿಸಿ ರೈತ ಮುಖಂಡರು ದೂರು ನೀಡಿದ್ದರು. ಈ ದೂರು ಪರಿಶೀಲನೆ ನಡೆಸಿದ ಜಿಲ್ಲಾಧಿಕಾರಿಗಳು, ಟೋಲ್‌ಗೇಟ್‌ಗಳಲ್ಲಿ ವಿನಾಯಿತಿ ನೀಡಿದ್ದಾರೆ.
ಜಿಲ್ಲೆಯಲ್ಲಿ ಬೆಳೆದ ಕಬ್ಬನ್ನು ಜಿಲ್ಲೆಯ ಸಕ್ಕರೆ ಕಾರ್ಖಾನೆಗೆ ಸಾಗಿಸುವ ವಾಹನಗಳಿಗೆ ಹಾಗೂ ಇತರೆ ಜಿಲ್ಲೆಯಿಂದ ಬರುವ ಕಬ್ಬು ಸಹಿತ ವಾಹನಗಳಿಗೆ ಟೋಲ್‌ ಶುಲ್ಕದಲ್ಲಿ ವಿನಾಯಿತಿ ನೀಡುವುದು ಸೂಕ್ತವಾಗಿದೆ. ಕರ್ನಾಟಕ ಪೊಲೀಸ್ ಕಾಯ್ದೆ ಅನ್ವಯ ಟೋಲ್‌ ಶುಲ್ಕದಲ್ಲಿ ವಿನಾಯಿತಿ ನೀಡಲು ಆದೇಶಿಸಲಾಗಿದೆ’ ಎಂದು ಜಿಲ್ಲಾಧಿಕಾರಿಯವರು ಆದೇಶದಲ್ಲಿ ಉಲ್ಲೇಖಿಸಿದ್ದಾರೆ.

Leave a Reply

Your email address will not be published. Required fields are marked *

error: Content is protected !!