ಉದಯವಾಹಿನಿ, ಬೆಂಗಳೂರು: ತಮಿಳುನಾಡು ಮುಖ್ಯಮಂತ್ರಿ ಸ್ಟಾಲಿನ್ ಮನವೊಲಿಸಿ ಮೇಕೆದಾಟು ಯೋಜನೆ ಜಾರಿಯಾಗುವಂತೆ ಮಾಡಿ, ಇಲ್ಲವೇ ತೀರ್ಥಯಾತ್ರೆಗೆ ಸಜ್ಜಾಗಿ ಎಂದು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರಿಗೆ ಸವಾಲು ಒಡ್ಡಲು ಬಿಜೆಪಿ ಸಜ್ಜಾಗುತ್ತಿದೆ. ಚುನಾವಣೆಗೂ ಮುನ್ನ ಮೇಕೆದಾಟು ಯೋಜನೆಗೆ ಆಗ್ರಹಿಸಿ ಪಾದಯಾತ್ರೆ ಮಾಡಿದ್ರಿ?ಈಗೇಕೆ ಇದ್ದಕ್ಕಿದ್ದಂತೆ ಸುಮ್ಮನಾದ್ರಿ? ಅಂತ ಕೇಳುವುದು ಬಿಜೆಪಿಯ ಈಗಿನ ಪ್ಲ್ಯಾನ್.ಮೇಕೆದಾಟು ಯೋಜನೆಯ ಜಾರಿಗೆ ತಮಿಳುನಾಡು ವಿರೋಧ ವ್ಯಕ್ತಪಡಿಸುತ್ತಿದೆ ಎಂದರೂ, ಅದೆಲ್ಲ ಗೊತ್ತಿಲ್ಲ. ನೀವು ಯೋಜನೆ ಜಾರಿ ಮಾಡ್ಲೇಬೇಕು ಅಂತ ರಂಪ ಮಾಡಿದ್ರಿ. ಹೇಗಿದ್ದರೂ ನಿಮ್ಮ ಪ್ರಮಾಣ ವಚನ ಸ್ವೀಕಾರ ಸಮಾರಂಭಕ್ಕೆ ತಮಿಳುನಾಡಿನ ಮುಖ್ಯಮಂತ್ರಿ ಎಂ.ಕೆ.ಸ್ಟಾಲಿನ್ ಬಂದಿದ್ದರು. ಅರ್ಥಾತ್, ಅವರು ನಮಗಿಂತ ನಿಮಗೆ ಕ್ಲೋಸು, ಭಾರತದ ರಾಜಕಾರಣ ಹೇಗಿರಬೇಕು ಅಂತ ನಿಮ್ಮ ಜತೆ ಸೇರಿ ನಿರ್ಧರಿಸುವವರು. ಹೀಗಾಗಿ ಅವರಿಗೆ ನೀವು ಹೇಳಿದರೆ ಮೇಕೆದಾಟು ಯೋಜನೆಯ ಅನುಷ್ಠಾನಕ್ಕೆ ತಕರಾರು ಮಾಡದೆ ಒಪ್ಪುತ್ತಾರೆ. ಹೀಗಾಗಿ ಮೊದಲು ಸ್ಟಾಲಿನ್ ಅವರ ಜತೆ ಮಾತನಾಡಿಸಿ ಕರ್ನಾಟಕ ಜಾರಿಗೊಳಿಸಲು ಬಯಸಿರುವ ಮೇಕೆದಾಟು ಯೋಜನೆಗೆ ನಮ್ಮ ತಕರಾರಿಲ್ಲ ಅಂತ ಹೇಳಿಸಿ ಎಂದು ಬಿಜೆಪಿ ಆಗ್ರಹಿಸಲಿದೆ.
