ಉದಯವಾಹಿನಿ, ಧಾರವಾಡ : ಭಾರತ ರತ್ನ ಸರ್.ಎಂ.ವಿಶ್ವೇಶ್ವರಯ್ಯ ಅವರು 1911 ರಲ್ಲಿ ಕಟ್ಟಿಸಿರುವ ಧಾರವಾಡ ಕೆಲಗೇರಿ ಕೆರೆ ಶತಮಾನ ಕಂಡಿದೆ. ಚರಂಡಿ ನೀರು, ಅಂತರಗಂಗೆ, ಕಳೆ, ಕಸ ತೆಗೆದು ಸ್ವಚ್ಛಗೊಳಿಸಿ ಕೆರೆಯನ್ನು ಶಾಪಮುಕ್ತಗೊಳಿಸಲು ಮುಂದಿನ 20 ದಿನಗಳ ಗಡುವು ನೀಡುತ್ತೇನೆ. ಈ ಕುರಿತು ಆಗಿರುವ ಕರ್ತವ್ಯಲೋಪ ಗುರುತಿಸಿ, ಸೂಕ್ತ ತನಿಖೆ ಕೈಗೊಳ್ಳಲು ಲೋಕಾಯುಕ್ತದಿಂದ ಸ್ವಯಂ ದೂರು ದಾಖಲಿಸಲಾಗುತ್ತಿದೆ ಎಂದು ಉಪ ಲೋಕಾಯುಕ್ತ ನ್ಯಾಯಮೂರ್ತಿ ಕೆ.ಎನ್.ಫಣೀಂದ್ರ ಅವರು ತಿಳಿಸಿದರು.
ಧಾರವಾಡ ನಗರದ ಕೆಲಗೇರಿ ಕೆರೆಗೆ ಭೇಟಿ ನೀಡಿ, ನಂತರ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದರು.
ಉಪ ಲೋಕಾಯುಕ್ತ ನ್ಯಾಮೂರ್ತಿಗಳು ಸಾರ್ವಜನಿಕರೊಂದಿಗೆ ಸ್ವತಃ ಎರಡು ಕೀ.ಮಿ ನಡೆಯುವ ಮೂಲಕ ಕೆರೆಯ ಅವ್ಯವಸ್ಥೆ ಪರಿಶೀಲಿಸಿದರು.
ಕೆರೆ ನಿರ್ವಹಣೆ ಹಾಗೂ ಕೆರೆ ಮಾಲಿಕತ್ವ ಸೇರಿದಂತೆ ಎಲ್ಲರನ್ನು ಈ ಪ್ರಕರಣದಲ್ಲಿ ಪಾರ್ಟಿ ಮಾಡಲಾಗುತ್ತದೆ. ಕೆರೆಗೆ ಸಂಬಂಧಿಸಿದ ಎಲ್ಲ ದಾಖಲೆಗಳನ್ನು ಮತ್ತು ತಾಂತ್ರಿಕ ವರದಿಯನ್ನು ಸಲ್ಲಿಸಬೇಕು. ಮಹಾನಗರಪಾಲಿಕೆಯವರು ಈಗಾಗಲೇ ರೂ. 150 ಕೋಟಿ ಮೊತ್ತದ ಪ್ರಸ್ತಾವನೆ ಸಿದ್ದಗೊಳಿಸಿರುವದಾಗಿ ತಿಳಿಸಿದ್ದಾರೆ. ಇದನ್ನು ಸಹ ಪಡೆದುಕೊಂಡು ನೇರವಾಗಿ ರಾಜ್ಯಪಾಲರನ್ನು ಭೇಟಿ ಮಾಡಿ, ಕೆರೆ ಸಮಸ್ಯೆಯನ್ನು ಮನವರಿಕೆ ಮಾಡಿಕೊಡುತ್ತೇನೆ ಎಂದು ಉಪ ಲೋಕಾಯುಕ್ತರು ತಿಳಿಸಿದರು.
ಕೆಲಗೇರಿ ಕೆರೆ ನಿರ್ವಹಣೆ ಮತ್ತು ಮಾಲಿಕತ್ವದ ವಿಚಾರದಲ್ಲಿ ಕೃಷಿ ವಿಶ್ವವಿದ್ಯಾಲಯ ಹಾಗೂ ಮಹಾನಗರಪಾಲಿಕೆಗಳು ಪರಸ್ಪರ ಬೊಟ್ಟು ತೋರಿಸಿ, ಕೆರೆ ಸ್ವಚ್ಛತೆ, ಅಭಿವೃದ್ಧಿಯನ್ನು ನಿರ್ಲಕ್ಷ್ಯ ಮಾಡಿದ್ದಾರೆ. ಕೆರೆಯಲ್ಲಿ ಸಾಕ?À್ಟು ಅಂತರಗಂಗೆ ಬೆಳೆದಿದೆ. ಕೆರೆ ವಾಕಿಂಗ್ ಪಾಥ್‍ದಲ್ಲಿ ಗಿಡಗಂಟಿ ಬೆಳೆದಿದೆ. ಚರಂಡಿ ನೀರು ಕೆರೆ ಸೇರುತ್ತಿದೆ. ಕೆರೆಯ ಸುತ್ತಲಿನ ಜನ ಮನೆಯ ದಿನಬಳಕೆ ತ್ಯಾಜ್ಯ, ಕಸಕಡ್ಡಿ ತಂದು ಕೆರೆಯಲ್ಲಿ ಹಾಕುತ್ತಿದ್ದಾರೆ. ಇದರ ಬಗ್ಗೆ ಯಾರು ಗಮನ ಹರಿಸಿಲ್ಲ ಎಂದು ತಮ್ಮ ಅಸಮಾದಾನ ವ್ಯಕ್ತಪಡಿಸಿದರು.
