ಉದಯವಾಹಿನಿ, ಬೆಂಗಳೂರು: ಗ್ರಾಮ ಪಂಚಾಯಿತಿ ಅಧ್ಯಕ್ಷರ ಅವಧಿಯನ್ನು ಎರಡೂವರೆ ವರ್ಷ ಮಾಡಲಾಗಿದೆ. ಅದೇ ರೀತಿ ಕೆಲವು ಸಚಿವರಿಗೂ ಸಂದೇಶ ನೀಡಿದ್ದೇವೆ. ಸದ್ಯಕ್ಕೆ ಈ ಬಗ್ಗೆ ಹೆಚ್ಚಿನ ಚರ್ಚೆ ಬೇಡ ಎಂದು ಉಪಮುಖ್ಯಮಂತ್ರಿ ಹಾಗೂ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಹೇಳಿದರು. ಕೆಪಿಸಿಸಿ ಕಚೇರಿಯ ಭಾರತ್ ಜೋಡೋ ಸಭಾಂಗಣದಲ್ಲಿ ನಡೆದ ಸಂವಿಧಾನ ದಿನಾಚರಣೆಯಲ್ಲಿ ಮಾತನಾಡಿದ ಅವರು, ಸೋನಿಯಾಗಾಂಧಿಯವರು ಪ್ರಧಾನಮಂತ್ರಿ ಪದವಿಯನ್ನು ತ್ಯಾಗ ಮಾಡಿದ ಸಂದರ್ಭದ ಕುರಿತು ವಿವರಣೆ ನೀಡಿದರು.
ಗ್ರಾಮಪಂಚಾಯಿತಿ ಅಧ್ಯಕ್ಷರನ್ನು ಒಂದು ವರ್ಷದ ಬಳಿಕ ರಾಜೀನಾಮೆ ಕೊಡಿಸಬೇಕಾದರೆ ಸಾಕಷ್ಟು ಸರ್ಕಸ್ ಮಾಡಬೇಕು. ಈಗ ಅವರ ಅಧಿಕಾರವಧಿ ಎರಡೂವರೆ ವರ್ಷ ಆಗಿದೆ. ಸಂಪುಟದ ಸಚಿವರಿಗೂ ಈ ಸಂದೇಶ ನೀಡಲಾಗಿದೆ ಎಂದು ಮುಗುಮಾಗಿ ಹೇಳಿದರು.

ಗ್ರಾಮ ಪಂಚಾಯಿತಿ ಅಧ್ಯಕ್ಷರ ಹುದ್ದೆಯನ್ನೇ ಬಿಟ್ಟುಕೊಡದ ಕಾಲದಲ್ಲಿ ಪ್ರಧಾನಿ ಹುದ್ದೆಯನ್ನು ಸೋನಿಯಾಗಾಂಧಿ ತ್ಯಾಗ ಮಾಡಿದರು. ಮಹಾತಗಾಂಧೀಜಿ, ಇಂದಿರಾಗಾಂಧಿ, ರಾಜೀವ್ಗಾಂಧಿಯವರು ದೇಶಕ್ಕಾಗಿ ತ್ಯಾಗ ಮಾಡಿದ್ದಾರೆ. ತಮಗೆ ವಿದ್ಯಾರ್ಥಿ ಜೀವನದಲ್ಲಿ ವಕೀಲರಾಗಬೇಕು ಎಂಬ ಆಕಾಂಕ್ಷೆಯಿತ್ತು. ಇಂದು ವಕೀಲರಾಗಿರುವ ಬಹಳಷ್ಟು ಮಂದಿ ತಮ್ಮ ಸಹಪಾಠಿಗಳು ಎಂದು ಸರಿಸಿಕೊಂಡರು.
ತಾವು ವಕೀಲರಾಗಿಲ್ಲ. ಈಗ ದಿನಬೆಳಗಾದರೆ ಇ.ಡಿ., ಸಿಬಿಐ, ಜಿಎಸ್ಟಿ ನೋಟೀಸ್ಗಳು ಬರುತ್ತಿವೆ. ಆ ನೋಟೀಸ್ಗಳನ್ನು ಓದಿ ನಿಭಾಯಿಸಿದರೆ ಸಾಕು ಎಂಬ ಕಾರಣಕ್ಕೆ ತಮ ಮಗನನ್ನು ಕಾನೂನು ಓದಿಸುತ್ತಿರುವುದಾಗಿ ಹಾಸ್ಯ ಚಟಾಕಿ ಹಾರಿಸಿದರು.  ಎಲ್ಲಾ ಧರ್ಮಗಳ ಗ್ರಂಥಗಳಿಗಿಂತಲೂ ಸಂವಿಧಾನ ಮಹತ್ವದ್ದಾಗಿದೆ. ಇಲ್ಲಿ ಎಲ್ಲಾ ಆಚರಣೆ ಹಾಗೂ ಸಮಾನತೆಗೆ ಅವಕಾಶ ಕಲ್ಪಿಸಲಾಗಿದೆ. ಹೋರಾಟ ಮಾಡದೇ ಇದ್ದರೂ ಪರವಾಗಿಲ್ಲ, ಮಾರಾಟವಾಗಬೇಡ ಎಂದು ಅಂಬೇಡ್ಕರ್ ಹೇಳಿದ್ದಾರೆ. ಜನ ಮಾರಾಟವಾಗಿಲ್ಲ. ಆದರೆ ದೊಡ್ಡ ದೊಡ್ಡ ನಾಯಕರು ಮಾರಾಟವಾಗಿದ್ದನ್ನು ನೋಡಿದ್ದೇವೆ ಎಂದರು.

Leave a Reply

Your email address will not be published. Required fields are marked *

error: Content is protected !!