ಉದಯವಾಹಿನಿ, ಬೆಂಗಳೂರು: ಸಂವಿಧಾನದ ಮೌಲ್ಯಗಳು ಮತ್ತು ಅದರ ಆಶಯಗಳ ಬಗ್ಗೆ ಗೌರವ ಇಲ್ಲದ ಕಾಂಗ್ರೆಸ್ ಪಕ್ಷವನ್ನು ಬೇರು ಸಮೇತ ಕಿತ್ತೊಗೆಯುವ ಸಂಕಲ್ಪ ಮಾಡೋಣ ಎಂದು ವಿಧಾನಸಭೆಯ ಪ್ರತಿಪಕ್ಷದ ನಾಯಕ ಆರ್.ಅಶೋಕ್ ಕರೆ ನೀಡಿದ್ದಾರೆ.
ಸಾಮಾಜಿಕ ಜಾಲತಾಣ ಎಕ್ಸ್ ನಲ್ಲಿ ಪೋಸ್ಟ್ ಮಾಡಿರುವ ಅವರು, ದೇಶದಲ್ಲಿ ತುರ್ತು ಪರಿಸ್ಥಿತಿ ಹೇರಿ ಪ್ರಜಾಪ್ರಭುತ್ವದ ಕಗ್ಗೊಲೆ ಮಾಡಿದ್ದ ಕಾಂಗ್ರೆಸ್ನ ಸಂವಿಧಾನ ವಿರೋಧಿ ಧೋರಣೆ ಹೊಸದೇನೂ ಅಲ್ಲ. ಅದಕ್ಕೆ ದೊಡ್ಡ ಕರಾಳ ಇತಿಹಾಸವೇ ಇದೆ ಎಂದು ಆರೋಪಿಸಿದರು. ಸಿಎಂ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಕಳೆದ 18 ತಿಂಗಳಲ್ಲಿ ಸಂವಿಧಾನಕ್ಕೆ ಚ್ಯುತಿ ತರುವ ಕೆಲಸವನ್ನು ಪದೇ ಪದೇ ಮಾಡುತ್ತಲೇ ಬಂದಿದೆ. ಈ ಸಂವಿಧಾನದ ದಿನದಂದು ಇಂತಹ ಸರ್ಕಾರವನ್ನು ಕಿತ್ತೋಗೆಯಬೇಕು ಎಂದು ಹೇಳಿದ್ದಾರೆ.
ಹೆಜ್ಜೆ ಹೆಜ್ಜೆಗೂ ಸಂವಿಧಾನಕ್ಕೆ ಅಪಚಾರ, ಅವಮಾನ, ಸಂವಿಧಾನದ ಆಶಯಗಳಿಗೆ ಧಕ್ಕೆ ತರುತ್ತಲೇ ಇರುವ ಕಾಂಗ್ರೆಸ್ ಪಕ್ಷಕ್ಕೆ ಸಂವಿಧಾನದ ಬಗ್ಗೆ ಮಾತನಾಡುವ ನೈತಿಕತೆಯೂ ಇಲ್ಲ, ಅರ್ಹತೆಯೂ ಇಲ್ಲ ಎಂದಿದ್ದಾರೆ. ಭಾರತದ ಸಂವಿಧಾನದ ಪೀಠಿಕೆ ಆರಂಭವಾಗುವುದೇ ಭಾರತದ ಜನತೆಯಾದ ನಾವು ಎಂದು. ಆದರೆ ಸಂವಿಧಾನವನ್ನು ರಕ್ಷಿಸಬೇಕಾದ ಪ್ರಜಾಪ್ರಭುತ್ವದ ದೇಗುಲವಾದ ವಿಧಾನಸೌಧದಲ್ಲಿ ಕಾಂಗ್ರೆಸ್ ಕಾರ್ಯಕರ್ತರು ಪಾಕಿಸ್ತಾನ ಜಿಂದಾಬಾದ್ ಘೋಷಣೆ ಕೂಗುತ್ತಾರೆ. ಆ ದೇಶದ್ರೋಹಿಗಳ ಹೆಡೆಮುರಿ ಕಟ್ಟಬೇಕಾದ ಕಾಂಗ್ರೆಸ್ ಸರ್ಕಾರ ಅದನ್ನು ಸಮರ್ಥನೆ ಮಾಡಿಕೊಳ್ಳುತ್ತದೆ. ಸುದ್ದಿ ಬಿತ್ತರ ಮಾಡಿದ ಮಾಧ್ಯಮಗಳ ಮೇಲೇ ಗೂಬೆ ಕೂರಿಸುವ ಕೆಲಸ ಮಾಡುತ್ತದೆ.
