ಉದಯವಾಹಿನಿ, ಬೆಂಗಳೂರು: ಸಚಿವ ಸಂಪುಟ ಪುನರ್ ರಚನೆಯಾಗಬೇಕು ಎಂಬ ಸುದ್ದಿಯಿದೆ. ಆದರೆ ಯಾವಾಗ, ಯಾರನ್ನು ಬದಲಾವಣೆ ಮಾಡಲಾಗುತ್ತದೆ ಎಂಬುದರ ಮಾಹಿತಿ ಇಲ್ಲ ಎಂದು ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ ತಿಳಿಸಿದ್ದಾರೆ.ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮಂತ್ರಿಮಂಡಲ ಪುನರ್ ರಚನೆಯಾಗಬಹುದು ಅಥವಾ ಆಗದೇ ಇರಬಹುದು. ಖಾತೆ ಬದಲಾವಣೆಯ ಬಗ್ಗೆಯೂ ಚರ್ಚೆ ಇದೆ ಎಂದು ಹೇಳಿದರು.
ದೆಹಲಿಯಲ್ಲಿ ಯಾವುದೇ ತೀರ್ಮಾನವಾದರೂ ಅದೇ ಅಂತಿಮ. ದೆಹಲಿಯಿಂದ ಪಟ್ಟಿ ಬಂದರೆ ಕಥೆ ಮುಗಿಯಿತು. ಮನೆ ಖಾಲಿ ಮಾಡಿಕೊಂಡು ಹೋಗುತ್ತಿರಬೇಕು ಎಂದು ಹೇಳಿದರು. ಕಾಂಗ್ರೆಸ್ ಶಾಸಕರು ಪದೇಪದೇ ಪ್ರವಾಸ ಹೋಗುತ್ತಲೇ ಇರುತ್ತೇವೆ. ಬಹಿರಂಗವಾಗಿ ಹೇಳಿದರೆ ವಿವಾದವಾಗುತ್ತದೆ. ಕೊನೆಗೆ ಪ್ರವಾಸವೇ ರದ್ದಾಗುತ್ತದೆ. ಈ ಮೊದಲು ಮೈಸೂರಿಗೆ ಹೋಗಿದ್ದೆವು. ದುಬೈ ಪ್ರವಾಸ ಪ್ರಸ್ತಾಪವಿಲ್ಲ ಎಂದು ಹೇಳಿದರು.
ಗ್ಯಾರಂಟಿ ಯೋಜನೆಗಳು ಅಭಾಧಿತ. ಯಾರು, ಏನು ಹೇಳಿದರೂ ಅವುಗಳನ್ನು ಹಿಂಪಡೆಯುವುದಿಲ್ಲ. ಚರ್ಚೆಗಳು ನಡೆಯುತ್ತಲೇ ಇರುತ್ತವೆ. ಆದರೆ ಜನರ ಸೌಲಭ್ಯಗಳನ್ನು ನಿಲ್ಲಿಸುವುದಿಲ್ಲ. ಸಂಪನೂಲ ಕ್ರೂಢೀಕರಣಕ್ಕೆ ಹೊಸ ಹೊಸ ಮೂಲಗಳನ್ನು ಹುಡುಕಿ ಮುಂದಿನ ಬಜೆಟ್ನಲ್ಲಿ ಅನುದಾನ ಹೆಚ್ಚಿಸಲು ಕ್ರಮ ಕೈಗೊಳ್ಳಲಾಗುತ್ತದೆ. ಲೋಕೋಪಯೋಗಿ ಇಲಾಖೆಯಲ್ಲಿ ಅನುದಾನದ ಕೊರತೆಯಿಲ್ಲ. ಅಭಿವೃದ್ಧಿ ಕಾರ್ಯಗಳಿಗೆ ಸಾಕಷ್ಟು ಹಣ ನೀಡುತ್ತಿದ್ದೇವೆ ಎಂದರು.
ಹಾಸನದಲ್ಲಿ ಡಿ.5 ರಂದು ಸಮಾವೇಶ ನಡೆಯುವ ಬಗ್ಗೆ ಕೇಳಿದ್ದೇನೆ. ಆದರೆ ಹೆಚ್ಚಿನ ಮಾಹಿತಿ ಇಲ್ಲ. ಕಾಂಗ್ರೆಸ್ ಪಕ್ಷದ ತಾವೂ ಸಮಾವೇಶದಲ್ಲಿ ಭಾಗವಹಿಸುತ್ತೇನೆ. ಸಿದ್ದರಾಮಯ್ಯ ಬೆಂಬಲಿಗರು ಸಮಾವೇಶ ನಡೆಸುತ್ತಿರುವುದಕ್ಕೆ ವ್ಯಕ್ತಿಪೂಜೆ ಎಂಬ ಟೀಕೆ 12 ವರ್ಷಗಳಿಂದಲೂ ಇದೆ. ಅಭಿಮಾನಿಗಳು ಮಾಡುವ ಕಾರ್ಯಕ್ರಮಕ್ಕೆ ತಡೆ ಹಾಕಲು ಸಾಧ್ಯವಿಲ್ಲ ಎಂದರು.
