ಉದಯವಾಹಿನಿ, ಗುಂಡ್ಲುಪೇಟೆ : ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದ ಕುಂದುಕೆರೆ ವಲಯ ವ್ಯಾಪ್ತಿಯ ಮಂಗಲ ಗ್ರಾಮದ ಕಾಡಂಚಿನಲ್ಲಿ ಮೂರು ವರ್ಷದ ಗಂಡಾನೆ ವಿದ್ಯುತ್ ಸ್ಪರ್ಶಿಸಿ ಸಾವನ್ನಪ್ಪಿದೆ. ಹುಲಿಯಮ್ಮನ ಗುಡಿಗೆ ಹೋಗುವ ದಾರಿಯಲ್ಲಿ ಷರೀಫ್‌ಖಾನ್ ಎಂಬುವರ ಜಮೀನಿನಲ್ಲಿ ಬೆಳೆಯಲಾಗಿದ್ದ ರಾಗಿ ರಕ್ಷಣೆಗೆ ಅನುಮತಿ ಪಡೆಯದೆ ವಿದ್ಯುತ್ ತಂತಿ ಬೇಲಿ ಅಳವಡಿಸಲಾಗಿತ್ತು. ಸೋಮವಾರ ತಡರಾತ್ರಿ ಮೇವು ಅರಸಿ ಬಂದಾಗ ಆನೆಗೆ ವಿದ್ಯುತ್ ತಗುಲಿ ಮೃತಪಟ್ಟಿದೆ. ಭೂಮಾಲೀಕ ಷರೀಫ್‌ಖಾನ್ ಜಮೀನನ್ನು ಬೇರೊಬ್ಬರಿಗೆ ಗುತ್ತಿಗೆ ನೀಡಿದ್ದರು ಎನ್ನಲಾಗಿದೆ. ಭೂಮಿಯ ಮಾಲೀಕ, ಗುತ್ತಿಗೆದಾರನ ವಿರುದ್ಧ ಪ್ರಕರಣ ದಾಖಲಿಸಲಾಗಿದೆ ಎಂದು ಬಂಡಿಪುರ ಹುಲಿ ಯೋಜನೆಯ ಉಪ ಅರಣ್ಯ ಸಂರಕ್ಷಣಾಧಿಕಾರಿ ಎಸ್.ಪ್ರಭಾಕರನ್ ಮಾಹಿತಿ ನೀಡಿದರು.
ರೈತರ ಆಕ್ರೋಶ:
ರೈತರ ಬೆಳೆಗಳಿಗೆ ಕಾಡಾನೆಗಳು ಸೇರಿ ಕಾಡು ಪ್ರಾಣಿಗಳು ನಿರಂತರವಾಗಿ ದಾಳಿ ಮಾಡಿ ಬೆಳೆ ಹಾಳು ಮಾಡುತ್ತಿದ್ದರೂ ಅರಣ್ಯ ಇಲಾಖೆ ಸಿಬ್ಬಂದಿ ಪರಿಣಾಮಕಾರಿಯಾಗಿ ರಾತ್ರಿ ಗಸ್ತು ತಿರುಗುತ್ತಿಲ್ಲ ಬೆಳಗಿನ ಜಾವ ಕಾಡುಪ್ರಾಣಿಗಳು ರೈತರ ಜಮೀನಿಗೆ ನುಗ್ಗಿ ಬೆಳೆ ನಾಶ ಮಾಡುತ್ತಿವೆ. ಬೆಳ ಉಳಿಸಿಕೊಳ್ಳಲು ಅನಿವಾರ್ಯವಾಗಿ ರೈತರೇ ವಿದ್ಯುತ್ ತಂತಿಬೇಲಿ ಹಾಕಿಸಿಕೊಂಡಿದ್ದಾರೆ ಎಂದು ರೈತ ಉಮೇಶ್ ಆಕ್ರೋಶ ವ್ಯಕ್ತಪಡಿಸಿದರು.
