ಉದಯವಾಹಿನಿ , ಬೆಂಗಳೂರು: ಅಡುಗೆ ಅನಿಲ ಸಿಲಿಂಡರ್ ಸ್ಫೋಟಗೊಂಡ ೩ ಮನೆಗಳಿಗೆ ಬೆಂಕಿ ತಗುಲಿದ್ದು, ಒಂದೇ ಕುಟುಂಬದ ನಾಲ್ವರು ಗಾಯಗೊಂಡಿರುವ ದುರ್ಘಟನೆ ದೇವರಜೀವನ(ಡಿಜೆ)ಹಳ್ಳಿಯ ಆನಂದ್ ಥಿಯೇಟರ್ ಬಳಿ ನಡೆದಿದೆ. ಘಟನೆಯಲ್ಲಿ ಪತಿ ನಾಜೀರ್, ಪತ್ನಿ ಕುಲ್ಸುಮ್ ಹಾಗೂ ಇಬ್ಬರು ಮಕ್ಕಳು ಗಾಯಗೊಂಡಿದ್ದು, ಅವರನ್ನು ವಿಕ್ಟೋರಿಯಾ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ನಾಜೀರ್ ಪಾನಿಪುರಿ ವ್ಯಾಪಾರ ಮಾಡಿಕೊಂಡಿದ್ದರು. ಸ್ಫೋಟದ ತೀವ್ರತೆಗೆ ಮೂರೂ ಮನೆಗಳು ಪುಡಿಪುಡಿಯಾಗಿವೆ.
ರೆಗ್ಯುಲೇಟರ್ ಆನ್ ಆಗಿದ್ದರಿಂದ ಗ್ಯಾಸ್ ಸೋರಿಕೆಯಾಗಿದೆ. ರೆಗ್ಯುಲೇಟರ್ ೨೦೧೬ರಲ್ಲೇ ಡೇಟ್ ಬಾರ್ ಆಗಿದೆ. ಅದರಿಂದಲೇ ಗ್ಯಾಸ್ ಲೀಕೇಜ್ ಆಗಿ ಮನೆ ತುಂಬ ಆವರಿಸಿದೆ. ನಿನ್ನೆ ಬೆಳಗ್ಗೆ ೧೧:೩೦ಕ್ಕೆ ಇದ್ದಕ್ಕಿದ್ದಂತೆ ಸ್ಫೋಟ ಸಂಭವಿಸಿದೆ ಎಂದು ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿದೆ. ಘಟನಾ ಸ್ಥಳಕ್ಕೆ ಡಿಜೆ ಹಳ್ಳಿ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
