ಉದಯವಾಹಿನಿ , ಬೆಂಗಳೂರು : ನೆರೆಯ ತಮಿಳುನಾಡಿಗೆ ಅಪ್ಪಳಿಸಿರುವ ಫೆಂಗಲ್ ಚಂಡ ಮಾರುತದ ಬಿಸಿ ರಾಜಧಾನಿ ಬೆಂಗಳೂರಿಗೂ ತಟ್ಟಿದೆ.ನಿನ್ನೆ ರಾತ್ರಯಿಂದ ಇಂದು ಬೆಳಗಿನವರೆಗೆ ಜಿಟಿಜಿಟಿ ಮಳೆಗೆ ಜನ ಹೈರಾಣರಾಗಿದ್ದಾರೆ.ವಾರಾಂತ್ಯವಿದ್ದರೂ ಜನರು ಮನೆಯಿಂದ ಹೊರಬರಲು ಹಿಂದೇಟು ಹಾಕುತ್ತಾರೆ. ಜನರು ಬೆಚ್ಚನೆಯ ಉಡುಪುಗಳಿಗೆ ಮೊರೆ ಹೋಗಿದ್ದಾರೆ.ಫೆಂಗಲ್ ಚಂಡಮಾರುತ ಪ್ರಭಾವದಿಂದ ಬೆಂಗಳೂರಿನಲ್ಲಿ ಮೋಡ ಕವಿದ ವಾತಾವರಣದಿಂದ ಕೂಡಿದೆ.
ಚಂಡಮಾರುತ ಪ್ರಭಾವ ನಗರದಲ್ಲಿ ಮುಂದಿನ ಕೆಲವು ದಿನಗಳ ಕಾಲ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ. ಮೋಡ ಕವಿದ ವಾತಾವರಣ ಮತ್ತು ಹನಿ ಮಳೆಯಿಂದಾಗಿ ನಗರದಲ್ಲಿ ಚಳಿಯ ವಾತಾವರಣ ಇರುತ್ತದೆ. ಮನೆಯಿಂದ ಹೊರಗೆ ಹೋಗುವಾಗ ನಿವಾಸಿಗಳು ಛತ್ರಿ ಅಥವಾ ರೈನ್‌ಕೋಟ್‌ಗಳನ್ನು ಒಯ್ಯಲು ಸಲಹೆ ನೀಡಲಾಗಿದೆ.
ಹವಾಮಾನ ಇಲಾಖೆ ಮುನ್ಸೂಚನೆಗಳ ಪ್ರಕಾರ, ಮುಂದಿನ ದಿನಗಳಲ್ಲಿ ಬೆಂಗಳೂರಿನಲ್ಲಿ ಮೋಡ ಕವಿದ ವಾತಾವರಣ ಮತ್ತು ಲಘು ಮಳೆಯಾಗುವ ನಿರೀಕ್ಷೆಯಿದೆ. ತಾಪಮಾನವು ೧೮ ಡಿಗ್ರಿ ಸೆಲ್ಶಿಯಸ್ ಮತ್ತು ೨೬ ಡಿಗ್ರಿ ಸೆಲ್ಶಿಯಸ್ ನಡುವೆ ಇರಬಹುದು ಎಂದು ನಿರೀಕ್ಷಿಸಲಾಗಿದೆ.
