ಉದಯವಾಹಿನಿ , ಹುಬ್ಬಳ್ಳಿ: ಬೆಳಗಾವಿ ನಗರ ಪೊಲೀಸ್ ಆಯುಕ್ತ ಯಡಾ ಮಾರ್ಟಿನ್ ಹುದ್ದೆಗೆ ಅನ್ಫಿಟ್ ಎಂದು ಕೇಂದ್ರ ಸಚಿವ ಪ್ರಹ್ಲಾದ್ ಜೋಷಿ ತೀವ್ರ ವಾಗ್ದಾಳಿ ನಡೆಸಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬೆಳಗಾವಿಯ ಸುವರ್ಣಸೌಧದಲ್ಲಿ ನಡೆದ ಘಟನೆಗೆ ಪೊಲೀಸ್ ಆಯುಕ್ತ ಯಡಾ ಮಾರ್ಟಿನ್ ನೇರ ಕಾರಣ.
ಭದ್ರತೆ ಒದಗಿಸುವಲ್ಲಿ ಅವರು ಸಂಪೂರ್ಣವಾಗಿ ವಿಫಲರಾಗಿದ್ದಾರೆ. ಇಂಥವರು ಹುದ್ದೆಯಲ್ಲಿರಲು ಅನ್ಫಿಟ್ ಎಂದು ಕೆಂಡಕಾರಿದರು. ತಾವೊಬ್ಬ ಸಾರ್ವಜನಿಕ ಸೇವೆಯಲ್ಲಿದ್ದೇನೆ ಎಂಬುದನ್ನು ಮರೆತು ವಕ್ತಾರರಂತೆ ನಡೆದುಕೊಂಡಿದ್ದಾರೆ. ಮೊದಲು ಸರ್ಕಾರ ಆಯುಕ್ತ ಯಡಾಮಾರ್ಟಿನ್ ಅವರನ್ನು ಸೇವೆಯಿಂದ ಅಮಾನತುಪಡಿಸಬೇಕು. ಅವರ ವಿರುದ್ಧ ಕೇಂದ್ರ ಸರ್ಕಾರಕ್ಕೂ ದೂರು ನೀಡುವ ಬಗ್ಗೆ ಚಿಂತನೆ ನಡೆಸಲಾಗಿದೆ ಎಂದರು.
ಸುವರ್ಣಸೌಧದಲ್ಲಿ ಸಚಿವರೊಬ್ಬರ ಬೆಂಬಲಿಗರು ಒಳಗೆ ನುಗ್ಗಿ ವಿಧಾನಪರಿಷತ್ ಸದಸ್ಯ ಸಿ.ಟಿ.ರವಿ ಅವರಿಗೆ ಬೆದರಿಕೆ ಹಾಕುತ್ತಾರೆ ಎಂದರೆ ಇದಕ್ಕೆ ಯಾರು ಹೊಣೆ ಸಭಾಪತಿಯವರು ಇವರನ್ನು ಕರೆದು ಛೀಮಾರಿ ಹಾಕಿ ಸೇವೆಯಿಂದ ಅಮಾನತುಪಡಿಸಬೇಕಿತ್ತು ಎಂದು ಒತ್ತಾಯಿಸಿದರು.
