ಉದಯವಾಹಿನಿ , ಮಂತ್ರಾಲಯ: ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ವಿರುದ್ಧ ಅಶ್ಲೀಲ ಪದ ಬಳಸಿ ಪೊಲೀಸರಿಂದ ಬಂಧನಕ್ಕೊಳಪಟ್ಟು ಜಾಮೀನಿನ ಮೇಲೆ ಬಿಡುಗಡೆಯಾಗಿರುವ ವಿಧಾನಪರಿಷತ್ ಸದಸ್ಯ ಸಿ.ಟಿ.ರವಿ ಮಂತ್ರಾಲಯ ರಾಘವೇಂದ್ರಸ್ವಾಮಿಗಳ ದರ್ಶನ ಪಡೆದರು.
ಪತ್ನಿ ಪಲ್ಲವಿ ಹಾಗೂ ಕಾರ್ಯಕರ್ತರ ಜೊತೆ ಮಂತ್ರಾಲಯಕ್ಕೆ ಆಗಮಿಸಿದ ಅವರು, ರಾಘವೇಂದ್ರ ಸ್ವಾಮಿಗೆ ದೀರ್ಘದಂಡ ನಮಸ್ಕಾರ ಹಾಕಿ ಭಕ್ತಭಾವ ಮೆರೆದರು.ಸದನದಲ್ಲಿ ಆಕ್ಷೇಪಾರ್ಹ ಪದ ಬಳಕೆ ಆರೋಪದಲ್ಲಿ ಬಂಧನಕ್ಕೊಳಗಾಗಿ ನಂತರ ಬಿಡುಗಡೆಯಾದ ನಂತರ ಚಿಕ್ಕಮಗಳೂರಿಗೆ ಶನಿವಾರ ವಾಪಸ್ ಆದರು. ತವರಿಗೆ ಮರಳಿದ ಕೂಡಲೇ ಪತ್ನಿ ಜೊತೆ ದೇವಸ್ಥಾನಕ್ಕೆ ಭೇಟಿ ನೀಡಿದ್ದರು.
ಪೂಜೆ ಸಲ್ಲಿಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನನ್ನ ಬಿಡುಗಡೆಗಾಗಿ ಹಲವರು ದೇವರಿಗೆ ಹರಕೆ ಹೊತ್ತಿದ್ದರು. ರಾತ್ರಿ ಆಗಮಿಸಿದಾಗ ಕಾರ್ಯಕರ್ತರು ಹರಕೆ ಹೊತ್ತಿದ್ದ ಬಗ್ಗೆ ಮಾಹಿತಿ ಲಭಿಸಿತ್ತು. ಹೀಗಾಗಿ ರಾಘವೇಂದ್ರ ಸ್ವಾಮಿ ಮಠಕ್ಕೆ ಬಂದು ದಂಪತಿ ಸಮೇತ ವಿಶೇಷ ಪೂಜೆ ಸಲ್ಲಿಸಿದ್ದಾಗಿ ತಿಳಿಸಿದ್ದಾರೆ.
