ಉದಯವಾಹಿನಿ, ಬೆಂಗಳೂರು: ದೇಶದ ಕಾನೂನು, ಸಂವಿಧಾನದಲ್ಲಿ ಡಿಜಿಟಲ್ ಅರೆಸ್ಟ್ ಎನ್ನುವ ವಿಧಾನವೇ ಇಲ್ಲ. ಮುಂಬಯಿ ಸೇರಿದಂತೆ ಎಲ್ಲಿಯೂ ಯಾವುದೇ ತನಿಖಾ ಸಂಸ್ಥೆಗಳು ಡಿಜಿಟಲ್ ಅರೆಸ್ಟ್ ಮಾಡುವುದಿಲ್ಲ ಇದರ ಬಗ್ಗೆ ಜನರಿಗೆ ಸಾಮಾನ್ಯ ಜ್ಞಾನ ಇರಬೇಕಾಗುತ್ತದೆ ಎಂದು ನಗರ ಪೊಲೀಸ್ ಆಯುಕ್ತ ಬಿ.ದಯಾನಂದ್ ತಿಳಿಸಿದ್ದಾರೆ.
ಯಾವುದೇ ತನಿಖಾ ಸಂಸ್ಥೆಗಳು ಡಿಜಿಟಲ್ ಅರೆಸ್ಟ್ ಮಾಡುವುದಿಲ್ಲ.ಡಿಜಿಟಲ್ ಅರೆಸ್ಟ್ ಬೆದರಿಕೆ ಕರೆಗಳ ಕುರಿತು ಸಾರ್ವಜನಿಕರು ತಿಳಿದುಕೊಳ್ಳಬೇಕು ಇಲ್ಲವೇ ಹತ್ತಿರದ ಪೊಲೀಸ್ ಠಾಣೆಗಳಿಗೆ ಮಾಹಿತಿಯನ್ನು ನೀಡಬೇಕು ಎಂದು ಕಮೀಷನರ್ ತಿಳಿಸಿದರು.
ಕಾನೂನಿನ ಪ್ರಕಾರ, ಯಾವುದೇ ವ್ಯಕ್ತಿಗೆ ನೋಟಿಸ್ ನೀಡಿ ಅಥವಾ ನೇರವಾಗಿ ಅವರನ್ನು ಭೇಟಿಯಾಗಿ ವಶಕ್ಕೆ ಪಡೆದು ಬಳಿಕ ಬಂಧಿಸುವ ಪದ್ಧತಿಯಿದೆ. ಬಂಧಿಸಿದ ಆರೋಪಿಯನ್ನು ೨೪ ಗಂಟೆಗಳೊಳಗಾಗಿ ನ್ಯಾಯಾಲಯದ ಮುಂದೆ ಹಾಜರುಪಡಿಸಬೇಕು ಎಂಬ ಕಠಿಣ ಕಾನೂನಿದೆ. ಆದರೆ ಡಿಜಿಟಲ್ ಅರೆಸ್ಟ್ ಎಂಬ ಪದ್ಧತಿ ನಮ್ಮ ಕಾನೂನಿನಲ್ಲಿ ಇಲ್ಲ ಎಂದು ಸ್ಪಷ್ಟಪಡಿಸಿದರು.
