ಉದಯವಾಹಿನಿ, ಬೆಂಗಳೂರು: ನಟ ಅಲ್ಲು ಅರ್ಜುನ್ ಮಾಡಿದ ತಪ್ಪಿನಿಂದಾಗಿ ಟಾಲಿವುಡ್ ಇಂದು ಸಿಎಂ ರೇವಂತ್ ರೆಡ್ಡಿ ಎದುರು ಕೈಮುಗಿದು,ತಲೆ ತಗ್ಗಿಸಿ ನಿಂತಿದೆ ಎಂದು ತೆಲುಗು ನಿರ್ಮಾಪಕ, ನಿರ್ದೇಶಕ ತಮರೆಡ್ಡಿ ಭಾರದ್ವಾಜ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಪುಷ್ಪ-೨ ಶೋ ವೇಳೆ ಹೈದರಾಬಾದ್ ಸಂದ್ಯಾ ಥಿಯೇಟರ್‌ನಲ್ಲಿ ನಡೆದ ನೂಕುನುಗ್ಗಲು ಹಾಗೂ ಅಲ್ಲು ಅರ್ಜುನ್ ಮೇಲಿನ ಪ್ರಕರಣದ ಕುರಿತು ಮಾತನಾಡಿದ ತಮ್ಮರೆಡ್ಡಿ, ಅಲ್ಲು ಒಬ್ಬ ನಟ, ಸ್ಟಾರ್ ಸಾರ್ವಜನಿಕವಾಗಿ ಹೇಗೆ ಇರಬೇಕೋ ಹಾಗೆ ಇರಬೇಕು ಅತಿರೇಕದ ವರ್ತನೆ ಸರಿಯಲ್ಲ ಎಂದಿದ್ದಾರೆ.
ಸಿಂಗಲ್ ಸ್ಕ್ರೀನ್ ಥಿಯೇಟರ್ ನಲ್ಲಿ ಸಿನಿಮಾ ರಿಲೀಸ್ ಆದ ದಿನ ಸಿನಿಮಾ ನೋಡಲು ಹೋದರೆ ಜನ ಜಮಾಯಿಸಿ ಗೊಂದಲಕ್ಕೀಡಾಗುತ್ತಾರೆ ಎಂದು ಗೊತ್ತಿದ್ದೂ ಅರ್ಜುನ್ ಅಲ್ಲಿಗೆ ಹೋಗಿ ತಪ್ಪು ಮಾಡಿದ್ದಾರೆ. ಅವರಿಂದಲೇ ಇಂದು ಟಾಲಿವುಡ್ ಸಿಎಂ ರೇವಂತ್ ರೆಡ್ಡಿ ಅವರ ಮುಂದೆ ನಿಂತಿದೆ ಇದು ಸರಿಯಲ್ಲ ಎಂದು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ತಮ್ಮರೆಡ್ಡಿ ಭಾರದ್ವಾಜ್ ಅವರು ೨೦ ತೆಲುಗು ಚಲನಚಿತ್ರಗಳನ್ನು ನಿರ್ದೇಶಿಸಿದ್ದಾರೆ ಮತ್ತು ೧೫ ಕ್ಕೂ ಹೆಚ್ಚು ತೆಲುಗು ಚಲನಚಿತ್ರಗಳನ್ನು ನಿರ್ಮಿಸಿದ್ದಾರೆ. ಅವರು ತೆಲುಗು ಚಲನಚಿತ್ರೋದ್ಯಮ ಸಂಘದ ಮಾಜಿ ಅಧ್ಯಕ್ಷರೂ ಆಗಿದ್ದಾರೆ. ಕಾಲ್ತುಳಿತದಲ್ಲಿ ಮಹಿಳೆ ಸಾವನ್ನಪ್ಪಿದ್ದು, ಆಕೆಯ ಮಗ ಗಂಭೀರವಾಗಿ ಗಾಯಗೊಂಡಿದ್ದಾನೆ. ಹೈದರಾಬಾದ್ ಪೊಲೀಸರು ಅಲ್ಲು ಅರ್ಜುನ್ ವಿರುದ್ಧ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ. ರಾಜಕೀಯ ಕೆಸರೆರಚಾಟಕ್ಕೂ ಕಾರಣವಾಗಿದೆ.
