ಉದಯವಾಹಿನಿ,ಮೈಸೂರು: ಸಾಲು ಸಾಲು ರಜೆ, ಹೊಸ ವರ್ಷದ ಹಿನ್ನೆಲೆಯಲ್ಲಿ ಸಾಂಸ್ಕøತಿಕ ನಗರಿ ಮೈಸೂರಿಗೆ ನಿರೀಕ್ಷೆಗೂ ಮೀರಿದ ಪ್ರವಾಸಿಗರ ದಂಡು ಹರಿದುಬಂದಿದೆ. ಇದರಿಂದಾಗಿ ಮೈಸೂರಿಗೆ ಪ್ರವಾಸಿಗರ ಪ್ರವಾಹ ಮುಂದುವರಿದಿದೆ. ಕ್ರಿಸ್‍ರಜೆ ಹಿನ್ನೆಲೆ ಕಳೆದ ವಾರ ಮೈಸೂರಿಗೆ ಹರಿದು ಬಂದಿದ್ದ ಪ್ರವಾಸಿಗರು ಈ ವಾರವೂ ಮೈಸೂರಿಗೆ ಭೇಟಿ ನೀಡಿದ್ದಾರೆ. ಶುಕ್ರವಾರ ಮನಮೋಹನ ಸಿಂಗ್ ನಿಧನ, 4ನೇ ಶನಿವಾರ ಹಾಗೂ ಭಾನುವಾರ ಸಾಲು ಸಾಲು ರಜೆ ಇದ್ದ ಹಿನ್ನೆಲೆಯಲ್ಲಿ ಮೈಸೂರು ಪ್ರವಾಸಿಗರಿಂದ ತುಂಬಿತುಳುಕುತ್ತಿತ್ತು. ರಸ್ತೆಗಳಲ್ಲಿ ವಾಹನ ದಟ್ಟಣೆ ಒಂದೆಯಾದರೆ, ನಗರದಲ್ಲಿರುವ ಎಲ್ಲಾ ಪ್ರವಾಸಿ ತಾಣಗಳು, ಹೋಟೆಲ್‍ಗಳು ಪ್ರವಾಸಿಗರಿಂದ ತುಂಬಿದ್ದವು.
ವರ್ಷಾಂತ್ಯದ ಹಿನ್ನೆಲೆ ಎಲ್ಲೆಡೆ ಶಾಲಾ-ಕಾಲೇಜುಗಳ ಶೈಕ್ಷಣಿಕ ಪ್ರವಾಸ ಆರಂಭವಾಗಿರುವುದು ಒಂದೆಡೆಯಾದರೆ, ಶನಿವಾರ, ಭಾನುವಾರ ರಜೆ ಇರುವುದರಿಂದ ಹೊರ ರಾಜ್ಯ ಹಾಗೂ ವಿವಿಧ ಜಿಲ್ಲೆಗಳಿಂದ ಸಾವಿರಾರು ಸಂಖ್ಯೆಯಲ್ಲಿ ಪ್ರವಾಸಿಗರು ಮೈಸೂರಿನತ್ತ ಆಗಮಿಸಿದ್ದಾರೆ. ಜಿಲ್ಲೆಯಲ್ಲಿರುವ ಪ್ರಮುಖ ಪ್ರವಾಸಿ ತಾಣಗಳಾದ ಚಾಮುಂಡಿ ಬೆಟ್ಟ, ಸೋಮನಾಥ ದೇವಾಲಯ, ಟಿಬೇಟಿಯನ್ ಕ್ಯಾಂಪ್, ತಲಕಾಡು, ನಂಜನಗೂಡು ಶ್ರೀಕಂಠೇಶ್ವರ ದೇಗುಲ, ಮೈಸೂರು ಅರಮನೆ, ನಾಗರಹೊಳೆ ಅಭಯಾರಣ್ಯ, ಕೆಆರ್‍ಎಸ್, ಚಾಮರಾಜೇಂದ್ರ ಮೃಗಾಲಯ, ದಸರಾ ವಸ್ತುಪ್ರದರ್ಶನ ಸೇರಿದಂತೆ ವಿವಿಧ ಪ್ರವಾಸಿ ತಾಣಗಳಲ್ಲಿ ನಿತ್ಯ ಸಾವಿರಾರು ಮಂದಿ ಭೇಟಿ ನೀಡುತ್ತಿದ್ದಾರೆ. ಈ ಹಿನ್ನೆಲೆ ಪ್ರವಾಸಿ ಕೇಂದ್ರಗಳಲ್ಲಿ ಜನಜಂಗುಳಿ ಏರ್ಪಟ್ಟಿದೆ. ಇದರ ನಡುವೆ ಶಾಲಾ-ಕಾಲೇಜುಗಳಲ್ಲಿ ಶೈಕ್ಷಣಿಕ ಪ್ರವಾಸ ಆರಂಭವಾಗಿರುವುದರಿಂದ ಸಾವಿರಾರು ಸಂಖ್ಯೆಯಲ್ಲಿ ಮಕ್ಕಳು ನಗರಕ್ಕೆ ಆಗಮಿಸಿ ಪ್ರವಾಸಿ ತಾಣಗಳಿಗೆ ಭೇಟಿ ನೀಡುತ್ತಿದ್ದಾರೆ.
