ಉದಯವಾಹಿನಿ, ಚನ್ನಪಟ್ಟಣ: ಮಹದೇಶ್ವರ ನಗರದ ಬನಶಂಕರಿ ಸ್ಟೋರ್ ನ ಉಗ್ರಾಣದಲ್ಲಿದ್ದ ೩೦ ಕ್ಕೂ ಅಧಿಕ ಬೆಳ್ಳುಳ್ಳಿ ಮೂಟೆಗಳನ್ನು ಕಳ್ಳತನ ಮಾಡ ಲಾಗಿದೆ. ಬೆಳ್ಳುಳ್ಳಿಯ ದರ ಹೆಚ್ಚಾಗಿರುವ ಕಾರಣ ಕಳ್ಳರ ಕಣ್ಣು ಬೆಳ್ಳುಳ್ಳಿ ಮೇಲೆ ಬಿದ್ದಿದ್ದು, ಅಂಗಡಿಯ ಮಾಲೀಕರು ೩೦ಕ್ಕೂ ಹೆಚ್ಚು ಬೆಳ್ಳುಳ್ಳಿ ಮೂಟೆಗಳನ್ನು ಸಂಗ್ರಹಿಸಿ ಉಗ್ರಾಣದಲ್ಲಿ ಇಟ್ಟಿದ್ದರು. ರಾತ್ರಿ ಕಳ್ಳರು ಉಗ್ರಾಣದ ಬಾಗಿಲು ಒಡೆದು, ಬೆಳ್ಳುಳ್ಳಿ ಮೂಟೆಗಳನ್ನು ಕದ್ದಿದ್ದಾರೆ. ಬೆಳ್ಳುಳ್ಳಿ ಹೊರತುಪಡಿಸಿ ಮತ್ತಾವುದೇ ವಸ್ತುಗಳನ್ನು ಕದ್ದಿಲ್ಲ.
ಈಚೆಗೆ ನಗರದ ಎಂ.ಜಿ. ರಸ್ತೆಯಲ್ಲಿ ಬೀದಿಬದಿ ವ್ಯಾಪಾರ ಮಾಡುವ ಮಂದಿ ತಳ್ಳುಗಾಡಿಗಳಲ್ಲಿ ಸಂಗ್ರಹಿಸಿಟ್ಟಿದ್ದ ಹತ್ತಾರು ಕೆ.ಜಿ ಬೆಳ್ಳುಳ್ಳಿಯನ್ನು ಕಳ್ಳತನ ಮಾಡ ಲಾಗಿತ್ತು. ಈಗ ಉಗ್ರಾಣ ದಲ್ಲಿದ್ದ ಮೂಟೆಗಟ್ಟಲೆ ಬೆಳ್ಳುಳ್ಳಿಯನ್ನು ಕಳ್ಳತನ ಮಾಡಿರುವುದು ವ್ಯಾಪಾರಿಗಳಲ್ಲಿ ಆತಂಕ ಹೆಚ್ಚಿಸಿದೆ. ಬೆಳ್ಳುಳ್ಳಿ ಕೆ.ಜಿ ಒಂದಕ್ಕೆ ೩೫೦ ರಿಂದ ೪೦೦ ಬೆಲೆ ಇದ್ದಿದ್ದರಿಂದ ಕಳ್ಳರು ಬೆಳ್ಳುಳ್ಳಿ ಕಳ್ಳತನ ಮಾಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ರಸ್ತೆಯಲ್ಲಿರುವ ಮನೆಗಳ ಸಿಸಿಟಿವಿಗಳ ದೃಶ್ಯಗಳನ್ನು ಸಂಗ್ರಹಿಸಲಾಗುತ್ತಿದ್ದು, ಶೀಘ್ರವೇ ಬೆಳ್ಳುಳ್ಳಿ ಕಳ್ಳರನ್ನು ಪತ್ತೆ ಹಚ್ಚಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ.
