ಉದಯವಾಹಿನಿ, ಕೆಆರ್ ಪುರ: ಸರ್ಕಾರದ ಖಜಾನೆ ಖಾಲಿಯಾಗಿದ್ದು, ಅಭಿವೃದ್ದಿ ಕಾರ್ಯಗಳಿಗೆ ಬಿಡಿಗಾಸು ಕೊಡುತ್ತಿಲ್ಲ ಹೀಗೆ ಮುಂದುವರೆದರೆ ರಾಜ್ಯ ದಿವಾಳಿಯಾಗುವುದು ಗ್ಯಾರೆಂಟಿ ಎಂದು ಶಾಸಕ ಬಿ.ಎ.ಬಸವರಾಜ ಅವರು ಆಕ್ರೋಶ ವ್ಯಕ್ತಪಡಿಸಿದರು.
ಕ್ಷೇತ್ರದ ಹೊರಮಾವು ವಾರ್ಡನ ನಗರೇಶ್ವರ ನಾಗೇನಹಳ್ಳಿಯಲ್ಲಿ ರಸ್ತೆ ಹಾಗೂ ಚರಂಡಿ ಅಭಿವೃದ್ಧಿ ಕಾಮಗಾರಿಗಳಿಗೆ ಗುದ್ದಲಿಪೂಜೆ ನೆರವೇರಿಸಿ ಅವರು ಮಾತನಾಡಿದರು.
ನಮ್ಮ ಕ್ಷೇತ್ರದಲ್ಲಿ ಅಭಿವೃದ್ದಿ ಕಾರ್ಯಗಳಿಗೆ ಅನುದಾನ ಕೊಡುತ್ತಿಲ್ಲ, ಬಿಜೆಪಿ ಪಕ್ಷದ ಶಾಸಕರಿಗಂತೂ ಬಿಡಿಗಾಸು ನೀಡುತ್ತಿಲ್ಲ, ಕಾಡಿ ಬೇಡಿ ಅನುದಾನ ತರಬೇಕಿದೆ. ಅಳಿದುಳಿದ ಕಾರ್ಯಗಳನ್ನು ಈಗ ಮಾಡಲಾಗುತ್ತಿದೆ, ಗ್ಯಾರೆಂಟಿಗಳಿಗೆ ಅನುದಾನ ಹೊಂದಿಸಲು ಹೆಣಗಾಡುತ್ತಿರುವ ಸರ್ಕಾರಕ್ಕೆ ರಾಜ್ಯದ ಸಮಗ್ರ ಅಭಿವೃದ್ದಿ ಮರೀಚಿಕೆಯಾಗಿದೆ ಎಂದರು.
ಸಾರ್ವಜನಿಕರ ಸಮಸ್ಯೆಗೆ ಸ್ಪಂದಿಸಲು ಕಷ್ಟಕರ ಪರಿಸ್ಥಿತಿ ನಿರ್ಮಾಣವಾಗಿದೆ, ರಾಜ್ಯ ಸರ್ಕಾರ ಮೂಲಭೂತ ಸೌಕರ್ಯಗಳನ್ನು ಒದಗಿಸುವ ನಿಟ್ಟಿನಲ್ಲಿ ಕ್ಷೇತ್ರಗಳಿಗೆ ತಾರತಮ್ಯ ಮಾಡದೆ ಅನುದಾನ ಬಿಡುಗಡೆ ಮಾಡುವಂತೆ ಒತ್ತಾಯಿಸಿದ್ದಾರೆ.
