ಉದಯವಾಹಿನಿ, ಬೆಂಗಳೂರು: ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಬೆಂಗಳೂರು, 2024 ರಲ್ಲಿ ಪ್ರಯಾಣಿಕರ ಸಂಖ್ಯೆ ಮತ್ತು ಸರಕು ಸಾಗಣೆಯಲ್ಲಿ ದಾಖಲೆಯ ಬೆಳವಣಿಗೆ ಕಂಡಿದೆ. 2024 ರಲ್ಲಿ ಬರೋಬ್ಬರಿ 40 ದಶಲಕ್ಷ ಪ್ರಯಾಣಿಕರು ಪ್ರಯಾಣ ಬೆಳೆಸುವ ಮೂಲಕ ಜಾಗತಿಕವಾಗಿ ಅತಿ ದೊಡ್ಡ ವಿಮಾನ ನಿಲ್ದಾಣಗಳಲ್ಲಿ ಒಂದು ಎಂಬ ಸ್ಥಾನಮಾನವನ್ನು ಬೆಂಗಳೂರು ವಿಮಾನ ನಿಲ್ದಾಣವು ಇನ್ನಷ್ಟು ಬಲಪಡಿಸಿಕೊಂಡಿದೆ. ಈ ಬೆಳವಣಿಗೆಯ ಮೂಲಕ ಬೆಂಗಳೂರು ವಿಮಾನ ನಿಲ್ದಾಣವು ದೈನಂದಿನ ವಿಮಾನಯಾನ ಸಂಚಾರ ನಿರ್ವಹಣೆಯಲ್ಲಿ (ಎಟಿಎಂ) ಗಮನಾರ್ಹ ಏರಿಕೆ ಕಂಡಿದೆ. ಜೊತೆಗೆ, ಹೊಸ ದೇಶೀಯ ಮತ್ತು ಅಂತಾರಾಷ್ಟ್ರೀಯ ಮಾರ್ಗಗಳಿಗೂ ವಿಮಾನ ಹಾರಾಟವನ್ನು ಪ್ರಾರಂಭಿಸಲಾಗಿದೆ.
ಬೆಂಗಳೂರು ವಿಮಾನ ನಿಲ್ದಾಣದ ಮೂಲಕ ವಾರ್ಷಿಕ ಸರಕು ಸಾಗಣೆಯು 496,227 ಮೆಟ್ರಿಕ್ ಟನ್ ತಲುಪುವ ಮೂಲಕ ಗರಿಷ್ಠ ದಾಖಲೆ ನಿರ್ಮಾಣವಾಗಿದೆ. ಇದು ಅಂತಾರಾಷ್ಟ್ರೀಯ ಮತ್ತು ದೇಶೀಯ ವಿಭಾಗಗಳಲ್ಲಿ ತನ್ನ ಕಾರ್ಯಕ್ಷಮತೆಯನ್ನು ಎತ್ತಿ ಹಿಡಿದಿದೆ. ಈ ಬೃಹತ್ ಬೆಳವಣಿಗೆಯು ಬೆಂಗಳೂರಿನಿಂದ ವಾಯು ಮಾರ್ಗದ ಮೂಲಕ ಪ್ರಯಾಣಿಸುವವರಿಗೆ ಹಾಗೂ ವ್ಯಾಪಾರ ವಹಿವಾಟು ನಡೆಸುವವರಿಗೆ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವು ಕೇಂದ್ರಬಿಂದು ಎಂಬ ಪ್ರಾಮುಖ್ಯತೆಯನ್ನು ಎತ್ತಿ ಹಿಡಿದಿದೆ.
