ಉದಯವಾಹಿನಿ,ಪ್ರಯಾಗ್‌ರಾಜ್ : ಉತ್ತರ ಪ್ರದೇಶದ 45 ದಿನಗಳ ಕಾಲ ಪ್ರಯಾಗ್‌ರಾಜ್‌ನಲ್ಲಿ ನಡೆಯುವ ಮಹಾ ಕುಂಭಮೇಳಕ್ಕೆ ವಿದ್ಯುಕ್ತ ಚಾಲನೆ ದೊರತಿದ್ದು, ಭಕ್ತರಿಗೆ ಯಾವುದೇ ತೊಂದರೆ ಆಗದಂತೆ ಮುನ್ನೆಚ್ಚರಿಕೆಯಾಗಿ ಬಿಗಿ ಭದ್ರತೆ ನಿಯೋಜಿಸಲಾಗಿದೆ.
ಮೊದಲ ಬಾರಿಗೆ ಎನ್‌ಡಿಆರ್‌ಎಫ್ ಪಡೆಯಿಂದ ನೀರಿನ ಮೇಲೆ ಆಂಬುಲೆನ್‌್ಸ ನಿರ್ಮಾಣ ಮಾಡಲಾಗಿದೆ. ಐಸಿಯು ಸೌಲಭ್ಯ ಹೊಂದಿರುವ ಅಂಬುಲೆನ್‌್ಸಗಳನ್ನು ನದಿ ನೀರಿನ ಮೇಲೆ ನಿಲ್ಲಿಸಲಾಗಿದೆ. ಅಂಬುಲೆನ್ಸ್ ಗಳಲ್ಲಿ ವೈದ್ಯಕೀಯ ಸಿಬ್ಬಂದಿ ಮತ್ತು ಹಾಸಿಗೆಗಳ ಜೊತೆಗೆ ಆಮ್ಲಜನಕ ಮತ್ತು ವೆಂಟಿಲೇಟರ್‌ಗಳ ಸೌಲಭ್ಯ ಕಲ್ಪಿಸಲಾಗಿದೆ. ನದಿಯಲ್ಲಿ ಸ್ನಾನ ಮಾಡುವವರ ಸುರಕ್ಷತೆಗಾಗಿ 800 ಪ್ರಾದೇಶಿಕ ಸಶಸ್ತ್ರ ಕಾನ್‌ಸ್ಟೇಬಲ್, 150 ಎಸ್‌ಡಿಆರ್‌ಎಫ್ ಸಿಬ್ಬಂದಿಗಳನ್ನು ನಿಯೋಜಿಸಲಾಗಿದೆ.
10,000 ಹೆಕ್ಟೇರ್‌ಗಳ ವಿಶಾಲ ಪ್ರದೇಶದಲ್ಲಿ ಧಾರ್ಮಿಕ ಕಾರ್ಯಕ್ರಮ ನಡೆಯುತ್ತಿದೆ. ಮಹಾ ಕುಂಭಮೇಳದ ಯಶಸ್ಸಿಗಾಗಿ ಉತ್ತರ ಪ್ರದೇಶದ ಸರ್ಕಾರ ಈಗಾಗಲೇ 9,000 ಕೋಟಿ ರೂ. ಅನುದಾನ ನೀಡಿದೆ. ಕೋಟ್ಯಂತರ ಭಕ್ತರಿಗಾಗಿ ವಿಶಾಲವಾದ ಪ್ರದೇಶದಲ್ಲಿ 1.5 ಲಕ್ಷ ಟೆಂಟ್‌ಗಳನ್ನು ನಿರ್ಮಿಸಲಾಗಿದ್ದು, ಭಕ್ತಾಧಿಗಳ ಸಂಚಾರಕ್ಕಾಗಿ 30 ಕಿರು ಸೇತುವೆಗಳನ್ನು ನಿರ್ಮಾಣ ಮಾಡಲಾಗಿದೆ.
400 ಕಿ.ಮೀ.ಗೂ ಹೆಚ್ಚು ತಾತ್ಕಾಲಿಕ ರಸ್ತೆಗಳನ್ನು ರಚಿಸಲಾಗಿದೆ. 69,000 ಬೀದಿ ದೀಪಗಳ ವ್ಯವಸ್ಥೆ ಮಾಡಲಾಗಿದೆ. ಇದರಿಂದ ಭಕ್ತರಿಗೆ ರಾತ್ರಿ ವೇಳೆಯೂ ಸೂಕ್ತವಾದ ರಕ್ಷಣೆ ಇರಲಿದೆ. ಕುಂಭ ಮೇಳದ ಪುಣ್ಯ ಸ್ನಾನದ ವೇಳೆ ಯಾವುದೇ ಅವಘಡ ಸಂಭವಿಸದಂತೆ ಮುನ್ನೆಚ್ಚರಿಕೆ ಕ್ರಮವಾಗಿ ನದಿಯ ಉದ್ದಕ್ಕೂ 12 ಕಿಲೋ ಮೀಟರ್ ಘಾಟ್‌ಗಳನ್ನು ನಿರ್ಮಿಸಲಾಗಿದೆ. ಈಗಾಗಲೇ 1.5 ಲಕ್ಷ ಶೌಚಾಲಯಗಳನ್ನು ನಿರ್ಮಿಸಲಾಗಿದೆ. ಮಹಾ ಕುಂಭ ಮೇಳ ಹಿನ್ನೆಲೆಯಲ್ಲಿ ನಗರದ 29 ದೇವಾಲಯಗಳನ್ನು ನವೀಕರಿಸಲಾಗಿದೆ. 1,800 ಹೆಕ್ಟೇರ್ ಪ್ರದೇಶವನ್ನು ವಾಹನಗಳ ಪಾರ್ಕಿಂಗ್‌ಗಾಗಿ ಕಾಯ್ದಿರಿಸಲಾಗಿದೆ.
