ಉದಯವಾಹಿನಿ, ಯಲಬುರ್ಗಾ: ತಾಲ್ಲೂಕಿನ ಚಿಕ್ಕಮ್ಯಾಗೇರಿ ಗ್ರಾಮದ ರೈತ ನಾಗೇಶ ತಿಪ್ಪಣ್ಣ ಮುರಾರಿ ಅವರ 2 ಎಕರೆ ಜಮೀನಿನಲ್ಲಿ ಬೆಳೆದಿದ್ದ ತೊಗರಿ ಬೆಳೆ ಮಂಗಳವಾರ ಬೆಂಕಿಗೆ ಆಹುತಿಯಾಗಿ ಸಂಪೂರ್ಣ ನಾಶವಾಗಿದೆ. ಜಮೀನಿನಲ್ಲಿದ್ದ ವಿದ್ಯುತ್ ವಿತರಣೆ ಘಟಕದಲ್ಲಿ ಕಾಣಿಸಿಕೊಂಡ ಶಾರ್ಟ್ ಸರ್ಕೀಟ್‌ನಿಂದಾಗಿ ಬೆಳಗೆ ಹೊತ್ತಿಕೊಂಡ ಬೆಂಕಿಯು ಕೆಲವೇ ಕ್ಷಣಗಳಲ್ಲಿ ಬಹುತೇಕ ಭಾಗ ವ್ಯಾಪಿಸಿ ಹೆಚ್ಚಿನ ನಷ್ಟಕ್ಕೆ ಕಾರಣವಾಗಿದೆ.
ವಿಷಯ ತಿಳಿದ ಅಗ್ನಿಶಾಮಕ ಸಿಬ್ಬಂದಿ ಬರುವಷ್ಟರಲ್ಲಿ ಸಾಕಷ್ಟು ಬೆಳೆ ಭಸ್ಮಗೊಂಡಿತ್ತು.
‘ಸುಮಾರು 17-18 ಕ್ವಿಂಟಲ್ ತೊಗರಿ ಫಸಲು ನಿರೀಕ್ಷಿಸಲಾಗಿತ್ತು. ಸ್ವಲ್ಪ ದಿನಗಳಲ್ಲಿ ಕಟಾವು ಮಾಡಲು ಸಿದ್ಧತೆ ಮಾಡಿಕೊಳ್ಳಲಾಗುತ್ತಿತ್ತು. ಆದರೆ ವಿದ್ಯುತ್ ಅವಘಡದಿಂದ ದೊಡ್ಡ ನಷ್ಟ ಉಂಟಾಗಿದೆ.
ಸಂಬಂಧಪಟ್ಟವರು ಸೂಕ್ತ ಪರಿಹಾರ ನೀಡಬೇಕು’ ಎಂದು ರೈತ ನಾಗೇಶ ಒತ್ತಾಯಿಸಿದ್ದಾರೆ.
