ಉದಯವಾಹಿನಿ, ಬೆಂಗಳೂರು: ಕೇಂದ್ರ ಸರ್ಕಾರ ಬಜೆಟ್ ನಾಳೆ ಮಂಡನೆಯಾಗಲಿದ್ದು, ಕ್ಷಣಗಣನೆ ಆರಂಭವಾಗಿದ್ದು, ಕರ್ನಾಟಕ ಸರ್ಕಾರ ಹಲವು ನಿರೀಕ್ಷೆಗಳನ್ನು ಇಟ್ಟುಕೊಂಡಿದೆ. ಬೆಂಗಳೂರಿನ ಮಹತ್ವದ ಅಭಿವೃದ್ಧಿ ಕಾರ್ಯಗಳು ಸೇರಿದಂತೆ ರಾಜ್ಯದ ಹಲವು ಮಹತ್ವದ ಯೋಜನೆಗಳಿಗೆ ಹೆಚ್ಚಿನ ಅನುದಾನದ ನಿರೀಕ್ಷೆಯಲ್ಲಿದೆ. ಈ ಸಂಬಂಧ ಈಗಾಗಲೇ ಕೇಂದ್ರದ ಮುಂದೆ ಅಧಿಕೃತ ಬೇಡಿಕೆಯ ಪಟ್ಟಿ ಸಲ್ಲಿಸಿದೆ.ಪ್ರಮುಖವಾಗಿ ಬೆಂಗಳೂರಿನ ಸಮಗ್ರ ಅಭಿವೃದ್ಧಿಗಾಗಿ ಹಲವು ಮಹತ್ವದ ಮೂಲಸೌಕರ್ಯ ಅಭಿವೃದ್ಧಿ ಯೋಜನೆ ಹಾಗೂ ರಾಜ್ಯದ ಹಲವು ಯೋಜನೆಗಳಿಗೆ ಅನುದಾನ ನೀಡುವಂತೆ ಬೇಡಿಕೆ ಇಡಲಾಗಿದೆ. ಈ ಸಂಬಂಧ ಇತ್ತೀಚೆಗೆ ಡಿಸಿಎಂ ಡಿ.ಕೆ.ಶಿವಕುಮಾರ್ ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್‌ಗೆ ಪತ್ರ ಬರೆದು ತಮ ಬೇಡಿಕೆಗಳನ್ನು ಮುಂದಿಟ್ಟಿದ್ದಾರೆ.
ಕಲ್ಯಾಣ ಕರ್ನಾಟಕದ ಹಿಂದುಳಿದ ಪ್ರದೇಶ ಮತ್ತು ಜಾಗತಿಕ ಪರಿಸರ ಸೂಕ್ಷ್ಮ ಪ್ರದೇಶವಾದ ಪಶ್ಚಿಮ ಘಟ್ಟಗಳ ಅಭಿವೃದ್ಧಿಗೆ ವಿಶೇಷ ಹೊಂದಾಣಿಕೆಯ ಅನುದಾನ ನೀಡುವಂತೆ ಕೋರಲಾಗಿದೆ. ಬರಪೀಡಿತ ಮಧ್ಯ ಕರ್ನಾಟಕಕ್ಕೆ ನೀರು ಒದಗಿಸಲು ಭದ್ರಾ ಮೇಲ್ದಂಡೆ ಯೋಜನೆಗೆ ಕೇಂದ್ರ ಬಜೆಟ್‌ನಲ್ಲಿ ಈ ಹಿಂದೆಯೇ ಘೋಷಿಸಿದ್ದ 5300 ಕೋಟಿ ಬಿಡುಗಡೆಗೂಳಿಸುವಂತೆ ಮನವಿ ಮಾಡಿದ್ದಾರೆ.
ಮೇಕೆದಾಟು ಮತ್ತು ಮಹದಾಯಿ ಯೋಜನೆಗಳಿಗೆ ಅನುಮೋದನೆ ನೀಡಿ ಎಂದು ಮನವಿ ಮಾಡಲಾಗಿದೆ. 15ನೇ ಹಣಕಾಸು ಆಯೋಗ ಶಿಫಾರಸು ಮಾಡಿರುವ ವಿಶೇಷ ಅನುದಾನ 11,495 ಕೋಟಿ ಬಿಡುಗಡೆಗೊಳಿಸಿ ಮತ್ತು ಅಂಗನವಾಡಿ ಕಾರ್ಯಕರ್ತೆಯರು ಮತ್ತು ಆಶಾ ಕಾರ್ಯಕರ್ತೆಯರ ಗೌರವಧನ 5,000 ಮತ್ತು ಅಡುಗೆಯವರು ಮತ್ತು ಸಹಾಯಕರಿಗೆ 2,000ಕ್ಕೆ ಹೆಚ್ಚಳಗೊಳಿಸುವಂತೆ ಬೇಡಿಕೆ ಇಡಲಾಗಿದೆ.
