ಉದಯವಾಹಿನಿ, ಬೆಂಗಳೂರು: ರಾಜ್ಯದಲ್ಲಿ ಮಾರಾಟವಾಗುವ ಎಲ್ಲ ಉತ್ಪನ್ನಗಳ ಮೇಲೆ ಕನ್ನಡದ ಹೆಸರು,ಕನ್ನಡಿಗರಿಗೆ ಏಜೆನ್ಸಿ, ಬ್ಯಾಂಕ್, ಹಣಕಾಸು ಸಂಸ್ಥೆಗಳಲ್ಲಿ ಕನ್ನಡಿಗರಿಗೆ ಮಾತ್ರ ಉದ್ಯೋಗ ಎನ್ನುವ ಮೂರು ಹಕ್ಕೊತ್ತಾಯಗಳನ್ನು ಮುಂದಿಟ್ಟುಕೊಂಡು ಕರ್ನಾಟಕ ರಕ್ಷಣಾ ವೇದಿಕೆಯಿಂದ ಇಂದು ರಾಜ್ಯದಾದ್ಯಂತ ಮಹಾಸಂಘರ್ಷ ಯಾತ್ರೆ ಆರಂಭಗೊಂಡಿದೆ.
ನಗರದ ಸ್ವಾತಂತ್ರ್ಯ ಉದ್ಯಾನವನದಲ್ಲಿ ಮಹಾಸಂಘರ್ಷ ಯಾತ್ರೆಗೆ ಚಾಲನೆ ನೀಡಿದ ವೇದಿಕೆ ರಾಜ್ಯಾಧ್ಯಕ್ಷ ಟಿ.ಎ.ನಾರಾಯಣಗೌಡ ಅವರು ಮೂರು ಹಕ್ಕೊತ್ತಾಯಗಳನ್ನು ಈಡೇರುವವರೆಗೆ ಹೋರಾಟ ನಿಲ್ಲಿಸುವುದಿಲ್ಲ ಎಂದು ಎಚ್ಚರಿಕೆ ನೀಡಿದರು. ರಾಜ್ಯದಲ್ಲಿ ಮಾರಾಟವಾಗುವ ಎಲ್ಲ ಬಗೆಯ ಉತ್ಪನ್ನಗಳ ಮೇಲೆ ಶೇ ೬೦ರಷ್ಟು ಬರಹಗಳು ಕನ್ನಡದಲ್ಲಿರಬೇಕು. ಅವುಗಳ ತಯಾರಿಕೆಗೆ ಏನನ್ನು ಬಳಸಲಾಗಿದೆ ಎನ್ನುವ ವಿಷಯಗಳು ಕನ್ನಡದಲ್ಲಿ ಕಡ್ಡಾಯವಾಗಿರಬೇಕು ಎಂದು ಆಗ್ರಹಿಸಿದರು.
ಅಂತರರಾಷ್ಟ್ರೀಯ ಪ್ರಮಾಣೀಕರಣ ಸಂಸ್ಥೆ (ಐಎಸ್ ಓ) ಉತ್ಪನ್ನಗಳ ಮೇಲೆ ಮುದ್ರಿಸುವ ಭಾಷೆ ಸ್ಥಳೀಯದ್ದೇ ಆಗಿರಬೇಕು, ಸ್ಥಳೀಯ ಜನರು ಓದಿ ಅರ್ಥ ಮಾಡಿಕೊಳ್ಳುವಂಥ ಭಾಷೆ ಆಗಿರಬೇಕು ಎಂದು ಶಿಫಾರಸು ಮಾಡುತ್ತದೆ. ವಿಶ್ವ ವ್ಯಾಪಾರ ಸಂಸ್ಥೆ (ಡಬ್ಲ್ಯು ಟಿ ಓ) ಮಾರ್ಗಸೂಚಿಗಳು ಕೂಡ ಇದನ್ನೇ ಹೇಳುತ್ತದೆ. ಅಂತಾರಾಷ್ಟ್ರೀಯ ವ್ಯಾಪಾರದ ಸಂದರ್ಭದಲ್ಲೂ ಉತ್ಪನ್ನಗಳ ಮೇಲಿನ ಬರೆಹಗಳು ಆಮದು ಮಾಡಿಕೊಳ್ಳುವ ದೇಶದ ಭಾಷೆಯಲ್ಲಿರಬೇಕು.
