ಉದಯವಾಹಿನಿ, ನವದೆಹಲಿ: ಪಕ್ಷವು ಹೀನಾಯ ಸೋಲು ಕಂಡ ಹಿನ್ನಲೆಯಲ್ಲಿ ಮುಖ್ಯಮಂತ್ರಿ ಸ್ಥಾನಕ್ಕೆ ಆತಿಶಿ ಸಿಂಗ್ ಮರ್ಲೆನಾ ಅವರು ರಾಜೀನಾಮೆ ನೀಡಿದ್ದಾರೆ. ಇಂದು ಬೆಳಗ್ಗೆ ದೆಹಲಿ ಲೆಫ್ಟಿನೆಂಟ್ ಗೌರ್ನರ್ ಜನರಲ್ ವಿನಯ್ಕುಮಾರ್ ಸೆಕ್ಸೇನ ಅವರನ್ನು ಭೇಟಿಯಾದ ಆತಿಶಿ ಸಿಂಗ್ ತಮ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದರು.
ರಾಜೀನಾಮೆಯನ್ನು ಸೆಕ್ಸೇನ ಅಂಗೀಕರಿಸಿದ್ದು, ಮುಂದಿನ ಸರ್ಕಾರ ರಚನೆಯಾಗುವವರೆಗೂ ಹಂಗಾಮಿ ಮುಖ್ಯಮಂತ್ರಿಯಾಗಿ ಮುಂದುವರೆಯಲು ಸೂಚಿಸಿದ್ದಾರೆ. ನಿನ್ನೆ ಪ್ರಕಟಗೊಂಡ ದೆಹಲಿಯ 70 ಕ್ಷೇತ್ರಗಳ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ 48, ಎಎಪಿ 22 ಗೆದ್ದರೆ ಕಾಂಗ್ರೆಸ್ ಸತತ ಮೂರನೇ ಬಾರಿಯೂ ಒಂದೂ ಸ್ಥಾನವನ್ನೂ ಗಳಿಸದೆ ಶೂನ್ಯ ಸಂಪಾದನೆ ಮಾಡಿದೆ.
ದೆಹಲಿ ಚುನಾವಣಾ ಫಲಿತಾಂಶದ ನಂತರ, ಬಿಜೆಪಿಯು ರಾಷ್ಟ್ರ ರಾಜಧಾನಿಯಲ್ಲಿ 27 ವರ್ಷಗಳ ನಂತರ ಸರ್ಕಾರ ರಚಿಸಲು ತುದಿಗಾಲಲ್ಲಿ ನಿಂತಿದೆ. ಈಗ ಕೇವಲ ಔಪಚಾರಿಕತೆಯ ಮಾತುಗಳು ಮಾತ್ರ ಬಾಕಿ ಉಳಿದಿದ್ದು, ಶೀಘ್ರದಲ್ಲೇ ಪ್ರಧಾನಿ ಮೋದಿ ಮತ್ತು ಗೃಹ ಸಚಿವ ಅಮಿತ್ ಶಾ ಅವರು ಹೊಸ ಸಿಎಂ ಹೆಸರಿನ ಬಗ್ಗೆ ನಿರ್ಧಾರ ತೆಗೆದುಕೊಳ್ಳುವ ಸಾಧ್ಯದೆ ಇದೆ.
