ಉದಯವಾಹಿನಿ, ಬೆಂಗಳೂರು : ರಾಜ್ಯ ಬಿಜೆಪಿಯೊಳಗಿನ ಭಿನ್ನಮತ ನಿರ್ಣಾಯಕ ಘಟ್ಟ ತಲುಪಿದ್ದು, ವಿಜಯೇಂದ್ರ ಬದಲಾವಣೆಗೆ ಪಟ್ಟು ಹಿಡಿದಿರುವ ಬಸನಗೌಡ ಪಾಟೀಲ್ ಯತ್ನಾಳ್ ಹಾಗೂ ಮುನಿಸಿಕೊಂಡಿರುವ ಶ್ರೀರಾಮುಲು ಅವರು ನಾಳೆ ನವದೆಹಲಿಗೆ ತೆರಳಲಿದ್ದಾರೆ. ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ, ಕೇಂದ್ರ ಗೃಹಸಚಿವ ಅಮಿತ್ ಷಾ, ರಾಜ್ಯ ಉಸ್ತುವಾರಿ ರಾಧಾಮೋಹನ್ ದಾಸ್ ಮತ್ತಿತರರನ್ನು ಭೇಟಿಯಾಗಿ ಪ್ರಸಕ್ತ ರಾಜಕೀಯ ವಿದ್ಯಮಾನಗಳ ಬಗ್ಗೆ ಮಾಹಿತಿ ನೀಡಲಿದ್ದಾರೆ.
ಬಸನಗೌಡ ಪಾಟೀಲ್ ಯತ್ನಾಳ್, ರಮೇಶ್ ಜಾರಕಿಹೊಳಿ, ಕುಮಾರಬಂಗಾರಪ್ಪ, ಬಿ.ಪಿ.ಹರೀಶ್, ಜಿ.ಎಂ.ಸಿದ್ದೇಶ್ವರ ಸೇರಿದಂತೆ ಕೆಲವರು ದೆಹಲಿಗೆ ಭೇಟಿ ನೀಡಿದ್ದರು. ಬಿಜೆಪಿ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಬಿ.ಎಲ್.ಸಂತೋಷ್ ಹೊರತುಪಡಿಸಿ ಬೇರೆ ನಾಯಕರನ್ನು ಭೇಟಿ ಮಾಡದೆ ಬರಿಗೈಯಲ್ಲಿ ಹಿಂತಿರುಗಿದ್ದರು. ಇದು ಅವರಿಗೆ ವೈಯಕ್ತಿಕವಾಗಿ ತೀವ್ರ ಹಿನ್ನಡೆ ಉಂಟು ಮಾಡಿತ್ತು.

ನವದೆಹಲಿಗೆ ತೆರಳುವ ಮುನ್ನ ದಾವಣಗೆರೆ ಜಿ.ಎಂ.ಸಿದ್ದೇಶ್ವರ ಅವರ ಅತಿಥಿಗೃಹದಲ್ಲಿ ಸಭೆ ಸೇರಿದ ಬಸನಗೌಡ ಪಾಟೀಲ್ ಯತ್ನಾಳ್ ಮತ್ತು ಇತರರು ಸಂಜೆ ದೆಹಲಿಗೆ ತೆರಳಲಿದ್ದಾರೆ.ಸೋಮವಾರ ಸಂಸತ್ ಅಧಿವೇಶನದಲ್ಲಿ ವರಿಷ್ಠರನ್ನು ಭೇಟಿಯಾಗಿ ಹಾಲಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಅವರನ್ನು ಬದಲಾಯಿಸಿ ಪಕ್ಷ ನಿಷ್ಠೆ ಹಾಗೂ ಸಂಘ ಪರಿವಾರಕ್ಕೆ ಹತ್ತಿರ ಇರುವವರಿಗೆ ರಾಜ್ಯಾಧ್ಯಕ್ಷ ಸ್ಥಾನ ನೀಡುವಂತೆ ಬೇಡಿಕೆ ಮುಂದಿಡಲಿದ್ದಾರೆ.

Leave a Reply

Your email address will not be published. Required fields are marked *

error: Content is protected !!