ಉದಯವಾಹಿನಿ, ಬೆಂಗಳೂರು: ರಾಜ್ಯದಲ್ಲಿ ಬಜೆಟ್ ಮಂಡನೆಗೂ ಮುನ್ನ ವಿಧಾನಸಭೆ ಮತ್ತು ವಿಧಾನ ಪರಿಷತ್ ಎರಡೂ ಸದನಗಳ ಸದಸ್ಯರ ಜತೆ ಚರ್ಚಿಸಿ ಬಜೆಟ್ ಮಂಡನೆ ಮಾಡುವುದು ಉತ್ತಮ ಎಂದು ವಿಧಾನ ಪರಿಷತ್ ಸದಸ್ಯ ಹೆಚ್. ವಿಶ್ವನಾಥ್ ಹೇಳಿದರು.
ಬೆಂಗಳೂರಿನ ಪ್ರೆಸ್‌ಕ್ಲಬ್‌ನಲ್ಲಿಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಪ್ರತಿ ವರ್ಷ ಬಜೆಟ್ ಮಂಡನೆ ಆಗುತ್ತಲೇ ಇರುತ್ತದೆ. ಆದರೆ ಅದು ಎಷ್ಟು ಪರಿಣಾಮಕಾರಿಯಾಗಿರುತ್ತದೆ, ಬಜೆಟ್‌ನಲ್ಲಿ ಏನೆಲ್ಲಾ ಇದೆ ಎಂದು ತಿಳಿದುಕೊಳ್ಳುವ ಗೋಜಿಗೆ ಹೋಗುವುದಿಲ್ಲ. ಹಾಗಾಗಿ ಬಜೆಟ್ ಮಂಡನೆಗೂ ಮುನ್ನ ಎರಡೂ ಸದನಗಳ ಸದಸ್ಯರನ್ನು ಒಟ್ಟುಗೂಡಿಸಿ, ಅವರೊಂದಿಗೆ ಆರ್ಥಿಕ ತಜ್ಞರನ್ನು ಸೇರಿಸಿ ಬಜೆಟ್ ಕುರಿತು ಚರ್ಚಿಸಬೇಕು ಎಂದು ಹೇಳಿದರು.
ಬಜೆಟ್ ಕುರಿತು ಯಾವ ಸದಸ್ಯರಿಗೂ ಸರಿಯಾದ ಅರಿವು ಇರುವುದಿಲ್ಲ. ಬಜೆಟ್ ಮಂಡನೆ ಸಮಯದಲ್ಲಿ ಸುಮ್ಮನೆ ಕೇಳಿಸಿಕೊಂಡು ಬರುತ್ತಾರೆ. ಹಾಗಾಗಿ ಬಜೆಟ್‌ಗೂ ಮುನ್ನ ಎರಡೂ ಸದನಗಳ ಸದಸ್ಯರ ಜತೆ ಚರ್ಚಿಸಿ ಬಜೆಟ್ ಮಂಡನೆ ಮಾಡಿದರೆ ಪರಿಣಾಮಕಾರಿಯಾಗಿರುತ್ತದೆ ಎಂದರು.
ಜನರ ಬೆವರಿನ ದುಡಿಮೆಯ ಫಲವಾಗಿ ಖಜಾನೆಗೆ ಹಣ ಬರುತ್ತದೆ. ಈ ಹಣ ನಷ್ಟವಾಗದಂತೆ ನೋಡಿಕೊಳ್ಳುವ ಜವಾಬ್ದಾರಿ ಸರ್ಕಾರದ್ದಾಗಿರುತ್ತದೆ. ಖಜಾನೆಯ ಹಣವನ್ನು ತನಗೆ ಇಷ್ಟ ಬಂದಂತೆ ತನಗಿರುವ ಪರಮೋಚ್ಛ ಅಧಿಕಾರದಲ್ಲಿ ವೆಚ್ಚ ಮಾಡುತ್ತೇವೆ ಎಂಬ ಹಣಕಾಸು ಸಚಿವರ ನಡವಳಿಕೆ ಜನತಂತ್ರಕ್ಕೆ ವಿರುದ್ಧ ಎಂದು ಅವರು ಹೇಳಿದರು. ರಾಜ್ಯ ಸರ್ಕಾರ ದುಂದು ವೆಚ್ಚವನ್ನು ನಿಯಂತ್ರಿಸಬೇಕು.
ಸಿಕ್ಕ ಸಿಕ್ಕವರಿಗೆಲ್ಲಾ ಸಂಪುಟ ದರ್ಜೆ ಕೊಟ್ಟು ಮಂತ್ರಿಗಳ ವಿಶೇಷ ಸೌಲಭ್ಯಗಳನ್ನು ನೀಡಲಾಗುತ್ತಿದೆ. ಇದರಿಂದ ಕೋಟಿಗಟ್ಟಲೆ ಹಣ ಪೋಲಾಗುತ್ತಿದೆ. ಇದಕ್ಕೆಲ್ಲಾ ಕಡಿವಾಣ ಹಾಕಿ ಎಂದು ಅವರು ಮುಖ್ಯಮಂತ್ರಿ ಸಿದ್ದರಾಮಯ್ಯನವರನ್ನು ಒತ್ತಾಯಿಸಿದರು.
ಮುಖ್ಯಮಂತ್ರಿ ಕಚೇರಿಯಲ್ಲೇ ಸಂವಿಧಾನ ಬಾಹಿರವಾಗಿ ಅನೇಕ ಹುದ್ದೆಗಳನ್ನು ಸೃಷ್ಠಿ ಮಾಡಿ ಅನಾವಶ್ಯಕವಾಗಿ ದುಂದುವೆಚ್ಚ ಮಾಡಲಾಗುತ್ತಿದೆ. ಇದರಿಂದ ಅಭಿವೃದ್ಧಿಗೆ ಹೊಡೆತ ಬೀಳುತ್ತಿದೆ ಎಂದು ಅವರು ಹೇಳಿದರು. ರಾಜ್ಯದ ಆಡಳಿತ ಚುಕ್ಕಾಣಿ ನಮ್ಮದು, ಯಾರು ನಮ್ಮನ್ನು ಪ್ರಶ್ನಿಸಬಾರದು ಎಂಬ ಧೋರಣೆ ಸರಿಯಲ್ಲ ಎಂದು ಅವರು ತಿಳಿಸಿದರು.
