ಉದಯವಾಹಿನಿ,ಬೆಂಗಳೂರು: ರಾಜ್ಯದ ಆಯ್ದ 10 ಜಿಲ್ಲೆಗಳಲ್ಲಿನ ಪ್ರವಾಸಿ ತಾಣಗಳನ್ನು ಅಭಿವೃದ್ಧಿಪಡಿಸಲು 2025-26ನೇ ಸಾಲಿನಲ್ಲಿ 50 ಕೋಟಿ ರೂ. ಅನುದಾನ ಒದಗಿಸಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಪ್ರಕಟಿಸಿದರು.
ವಿಧಾನಸಭೆಯಲ್ಲಿ 2025-26ನೇ ಸಾಲಿನ ಆಯವ್ಯಯ ಮಂಡಿಸಿದ ಅವರು, ರಾಜ್ಯದ ಪ್ರಮುಖ ಧಾರ್ಮಿಕ ಸ್ಥಳವಾದ ಸವದತ್ತಿಯ ಶ್ರೀ ರೇಣುಕಾ ಯಲ್ಲಮ್ಮ ಕ್ಷೇತ್ರ ಹಾಗೂ ಬೆಂಗಳೂರಿನಲ್ಲಿರುವ ದೇವಿಕಾರಾಣಿ ರೋರಿಚ್ ಎಸ್ಟೇಟ್ ಅನ್ನು ವಿಶೇಷ ಬಂಡವಾಳ ಯೋಜನೆಯಡಿ ಒಟ್ಟಾರೆ 199 ಕೋಟಿ ರೂ. ವೆಚ್ಚದಲ್ಲಿ ಅಭಿವೃದ್ಧಿಪಡಿಸಲಾಗುವುದು ಎಂದರು.
ರಾಜ್ಯದ ನೂತನ ಪ್ರವಾಸೋದ್ಯಮ ನೀತಿ 2024-29ನ್ನು ಜಾರಿಗೊಳಿಸಿದ್ದು, ಈ ನೀತಿಯಿಂದ ರಾಜ್ಯದಲ್ಲಿ 8000 ಕೋಟಿ ರೂ. ಹೂಡಿಕೆಯ ನಿರೀಕ್ಷೆ ಹಾಗೂ 1.5 ಲಕ್ಷ ಉದ್ಯೋಗ ಸೃಜನೆ ಗುರಿ ಹೊಂದಿದ್ದೇವೆ. ದಕ್ಷಿಣ ಕನ್ನಡ, ಉಡುಪಿ ಮತ್ತು ಉತ್ತರ ಕನ್ನಡ ಜಿಲ್ಲೆಗಳಲ್ಲಿ ಕಡಲ ತೀರದ ಅಭಿವೃದ್ಧಿ ಹಾಗೂ ರಸ್ತೆಬದಿ ಸೌಲಭ್ಯಗಳನ್ನು ಉನ್ನತೀಕರಿಸುವ ಮೂಲಕ ಶೈಕ್ಷಣಿಕ, ಆರೋಗ್ಯ, ಸಾಹಸ, ಪರಿಸರ, ಜಲಸಾರಿಗೆ ಹಾಗೂ ಕಡಲ ತೀರದ ಪ್ರವಾಸೋದ್ಯಮಗಳಿಗೆ ಲಭ್ಯವಿರುವ ಅವಕಾಶಗಳನ್ನು ಉಪಯೋಗಿಸಿಕೊಳ್ಳಲಾಗುವುದು ಎಂದು ಅವರು ಹೇಳಿದರು.
ಯುನೆಸ್ಕೋ ಪಾರಂಪರಿಕ ಪ್ರವಾಸಿ ತಾಣಗಳ ಪಟ್ಟಿಗೆ ಸೇರ್ಪಡೆಗೊಂಡಿರುವ ಬೇಲೂರು-ಹಳೇಬೀಡು-ಸೋಮನಾಥಪುರ ಪ್ರವಾಸಿ ತಾಣಗಳಲ್ಲಿ ಮೂಲಸೌಲಭ್ಯಗಳನ್ನು ಅಭಿವೃದ್ಧಿಪಡಿಸಲಾಗುವುದು. ಪ್ರವಾಸಿಗರ ಸುರಕ್ಷತೆಗಾಗಿ ಪ್ರವಾಸಿ ತಾಣಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಪ್ರವಾಸಿ ಮಿತ್ರರಿಗೆ ತರಬೇತಿ ನೀಡಿ ಅವರ ಸಂಖ್ಯೆಯನ್ನು 1000ಕ್ಕೆ ಹೆಚ್ಚಿಸಲಾಗುವುದು ಹಾಗೂ ಪ್ರವಾಸಿಗರಿಗೆ ಮಾಹಿತಿ ನೀಡಲು 24X7 ಪ್ರವಾಸಿ ಸಹಾಯವಾಣಿ ತೆರೆಯಲಾಗುವುದು ಎಂದು ಅವರು ತಿಳಿಸಿದರು.
