ಉದಯವಾಹಿನಿ, ಹೆತ್ತೂರು: ಮಲೆನಾಡು ಭಾಗವಾದ ಹತ್ತೂರು, ಯಸಳೂರು ಹೋಬಳಿಯಲ್ಲಿ ಬಿಸಿಲ ತಾಪ ಏರುತ್ತಿದ್ದು, ಕಾಫಿ ತೋಟಗಳನ್ನು ಉಳಿಸಿಕೊಳ್ಳಲು ಹರಸಾಹಸ ಪಡುತ್ತಿದ್ದಾರೆ. ಬೆಳೆಗಾರರು ಈಗಾಗಲೇ ಕಾಫಿ ಕೊಯ್ದು ಬಹುತೇಕ ಮುಗಿದಿದ್ದು, ಮರಗಸಿ ಮಾಡಿದ ಕಾಫಿ ತೋಟಗಳಲ್ಲಿ ನೀರು ಮತ್ತು ನೆರಳಿಲ್ಲದೆ ಗಿಡಗಳು ಒಣಗತೊಡಗಿವೆ. ಕಾಫಿ ಗಿಡಗಳಲ್ಲಿ ಇಬ್ಬನಿಯಿಂದ ಮೊಗ್ಗು ಮೂಡಲು ಪ್ರಾರಂಭವಾಗಿದ್ದು, ಈ ಹಂತದಲ್ಲಿ ಕಾಫಿ ಗಿಡಗಳಿಗೆ ನೀರು ಹಾಯಿಸದಿದ್ದರೆ ಮುಂದಿನ ಫಸಲಿಗೆ ಹೊಡೆತ ಬೀಳುವ ಸಾಧ್ಯತೆ ಇದೆ.
ಅರೇಬಿಕಾ ಕಾಫಿ ಗಿಡಗಳು ನೀರಿಲ್ಲದಿದ್ದರೂ ಮಳೆಯಾದೊಡನೆ ಹೂವಾಗುತ್ತವೆ. ಆದರೆ ರೋಬಸ್ಯ ತಳಿಗೆ ನೀರು ಅಗತ್ಯವಾಗಿರುವುದರಿಂದ ರೋಬಸ್ನ ಬೆಳೆದ ರೈತರು ನೀರು ಹಾಯಿಸುವುದು ಅನಿವಾರ್ಯವಾಗಿದೆ.
ಈ ಬಾರಿ ಕಾಫಿಗೆ ಉತ್ತಮ ಬೆಲೆ ಬಂದಿರುವುದರಿಂದ ಬಹುತೇಕ ರೈತರು ಒಳ್ಳೆಯ ಫಸಲು ತೆಗೆಯುವ ನಿರೀಕ್ಷೆಯಲ್ಲಿದ್ದಾರೆ. ಮಲೆನಾಡಿನಲ್ಲಿ
ಕೊಳವೆಬಾವಿ ತೆಗೆಸುವುದು, ವಿದ್ಯುತ್ ಸಂಪರ್ಕವಿಲ್ಲದ ಕಾಫಿ ತೋಟಗಳಿಗೆ ಜನರೇಟರ್ ಮೂಲಕ ನೀರು ಹಾಯಿಸುತ್ತಿರುವ ದೃಶ್ಯ ಸಾಮಾನ್ಯವಾಗಿದೆ. ಕೆಲವೆಡೆ ಅಂದರೆ ಪಶ್ಚಿಮ ಘಟ್ಟ ಅಂಚಿನ ಗ್ರಾಮಗಳಲ್ಲಿ ನೈಸರ್ಗಿಕ ಜಲ ಮೂಲಗಳಿಗೂ ಪಂಪ್‌ಸೆಟ್
ಅಳವಡಿಸುತ್ತಿರುವುದರಿಂದ ಗ್ರಾಮಗಳಲ್ಲಿ ಕುಡಿಯುವ ನೀರಿಗೆ ಸಮಸ್ಯೆ ಉಂಟಾಗುವ ಆತಂಕ ಶುರುವಾಗಿದೆ. ಕೊಳವೆಬಾವಿಯಲ್ಲಿ ನೀರಿದ್ದ ರೈತರು ಹಗಲು, ರಾತ್ರಿ ಎನ್ನದೇ ಆಗಾಗ ಬಿಡುವು ನೀಡಿ ಸ್ಪಿಂಕ್ಲರ್ ಮೂಲಕ ನೀರನ್ನು ಗಿಡಗಳಿಗೆ ಸಿಂಪಡಿಸುತ್ತಿದ್ದಾರೆ. ಹೆಚ್ಚೆಂದರೆ ಒಂದು ವಾರ ನೀರು ದೊರಕಬಹುದು.
ಅಲ್ಲಿಯವರೆಗೆ ಮಳೆಯಾದರೆ ಗಿಡಗಳು ಉಳಿಯುತ್ತವೆ. ಇಲ್ಲದಿದ್ದರೆ ಸರ್ವನಾಶವಾಗುತ್ತದೆ ಎಂದು ಬೆಳೆಗಾರರು ಹೇಳುತ್ತಿದ್ದಾರೆ.
ಮಲೆನಾಡಿನಲ್ಲೂ ಬಿಸಿಲ ತಾಪ 31ರಿಂದ 32 ಡಿಗ್ರಿ ಸೆಲ್ಸಿಯಸ್ ದಾಟುತ್ತಿದ್ದು, ಹಗಲು ವೇಳೆ ಮನೆಯಿಂದ ಹೊರಗೆ ಬರಲಾಗದ ಸ್ಥಿತಿ ನಿರ್ಮಾಣವಾಗುತ್ತಿದೆ. ಫೆಬ್ರುವರಿ ಅಂತ್ಯ ಅಥವಾ ಮಾರ್ಚ್ ಮೊದಲ ವಾರದಲ್ಲಿ ಮಳೆಯಾಗುವುದು ವಾಡಿಕೆ. ಈ ಬಾರಿ ಜನವರಿ ಕೊನೆಯಲ್ಲಿ ಅಲ್ಲಲ್ಲಿ ಸಣ್ಣ ಪ್ರಮಾಣದಲ್ಲಿ ಮಳೆ ಆಗದಿರುವುದರಿಂದ ನೀರಿಗೆ ಹೆಚ್ಚಿನ ಬೇಡಿಕೆ ಬಂದಿದೆ.

Leave a Reply

Your email address will not be published. Required fields are marked *

error: Content is protected !!