ಉದಯವಾಹಿನಿ, ಬಸವಕಲ್ಯಾಣ: ನಗರದ ಐತಿಹಾಸಿಕ ಕೋಟೆಯೊಳಗೆ ಎಲ್ಲೆಡೆ ಆಳೆತ್ತರಕ್ಕೆ ಹುಲ್ಲು ಬೆಳೆದಿದ್ದು ಹಾವು, ಚೇಳಿನ ಕಾಟವಿದೆ. ಕೆಲ ಗೋಡೆಗಳಲ್ಲಿ ಗಿಡ, ಮುಳ್ಳುಕಂಟಿಗಳು ಬೆಳೆದು ಬಿರುಕು ಬಿಟ್ಟಿದ್ದರಿಂದ ದೂರದಿಂದ ಬರುವ ಶಾಲಾ ಮಕ್ಕಳು ಮತ್ತು ಪ್ರವಾಸಿಗರು ಭಯಗೊಂಡು ಒಳಗಿನ ಎಲ್ಲವನ್ನೂ ನೋಡದೆ ಹಿಂದಿರುಗುತ್ತಿದ್ದಾರೆ.
ಬಸವಣ್ಣನವರು ಬಿಜ್ಜಳನ ಆಸ್ಥಾನದಲ್ಲಿ ಮಹಾಮಂತ್ರಿಯಾಗಿ ಈ ಕೋಟೆಯಲ್ಲಿಯೇ ಕಾರ್ಯಗೈದಿದ್ದರು. ಅವರನ್ನು ಕರ್ನಾಟಕದ ಸಾಂಸ್ಕೃತಿಕ ನಾಯಕ ಎಂದು ಘೋಷಿಸಲಾಗಿದೆ. ಸರ್ಕಾರದ ಪ್ರತಿ ಕಚೇರಿಯಲ್ಲೂ ಅವರ ಭಾವಚಿತ್ರ ಅಳವಡಿಸಲಾಗಿದೆ. ಆದರೆ ಅವರು ಆಸೀನರಾಗಿ ಜನಕಲ್ಯಾಣದ ಯೋಜನೆಗಳನ್ನು ಜಾರಿಗೆ ತಂದಿದ್ದ ಸ್ಥಳದ ಜೀರ್ಣೋದ್ಧಾರಕ್ಕೆ ಮಾತ್ರ ನಿರ್ಲಕ್ಷ ತೋರಲಾಗಿದೆ. ಈ ರೀತಿಯ ಅನಾದಾರ ಸರಿಯೇ ಎಂದು ಇಲ್ಲಿಗೆ ಬಂದವರೆಲ್ಲ ಪ್ರಶ್ನಿಸುವಂತಾಗಿದೆ.
ಕೆಲಸಲ ಅದೂ ವರ್ಷಕ್ಕೊಮ್ಮೆ ಶ್ರಮದಾನದ ಮೂಲಕ ಕೋಟೆಯ
ಸ್ವಚ್ಛತಾ ಕಾರ್ಯ ನಡೆದಿದೆ. ಆದರೆ ಇದಕ್ಕಾಗಿ ಕಾಯಂ ವ್ಯವಸ್ಥೆ ಆಗಿಲ್ಲ. ಪ್ರತಿದಿನವೂ ಕಸ ತೆಗೆಯುವುದಿಲ್ಲ. ಗಿಡ, ಮುಳ್ಳುಕಂಟೆಗಳನ್ನು ಕಡಿಯುವುದಿಲ್ಲ. ಹೀಗಾಗಿ ಅನೇಕ ಕಡೆ ಗೋಡೆಯ ಮಣ್ಣು ಕಲ್ಲುಗಳು ಕುಸಿಯುತ್ತಿವೆ. ಅಲ್ಲಲ್ಲಿ ದೊಡ್ಡ ರಂಧ್ರಗಳು ಕಾಣುತ್ತಿವೆ. ಮುಂದೆ ಹೆಜ್ಜೆ ಇಟ್ಟರೆ ಏನಾಗುತ್ತದೋ, ಮೈಮೇಲೆ ಏನು ಬೀಳುತ್ತದೋ ಎಂದು ಪ್ರವಾಸಿಗರು ಹೆದರುವಂತಾಗಿದೆ.
ಪ್ರಮುಖ ಆಕರ್ಷಣೀಯ ಕಟ್ಟಡಗಳಾದ ದರ್ಬಾರ್ ಹಾಲ್, ರಂಗೀನ್ ಮಹಲ್, ನೃತ್ಯ ಸಭಾಂಗಣ, ರಾಜ್ ಮಹಲ್, ರಾಣಿ ಮಹಲ್, ನೌಗಜ್ ತೋಫ್ ಬುರೂಜ್. ಕಡಕ್ ಬಿಜಲಿ ತೋಫ್ ಬುರೂಜ್, ಮೋಟ್ ಕಿ ಬಾವಡಿ ಸ್ಥಳಗಳಲ್ಲಿ ಹುಲ್ಲು ಬೆಳೆದಿದೆ. ಇಲ್ಲೆಲ್ಲ ಹೋಗುವುದಕ್ಕೆ ಇರುವ ದಾರಿಗಳಲ್ಲೂ ಹುಲ್ಲು ಮುಳ್ಳು ಕಂಟಿಗಳಿವೆ. ಆದರೂ, ಸಂಬಂಧಿತರು ಕಣ್ಣೆತ್ತಿ ನೋಡುತ್ತಿಲ್ಲ.ಕೋಟೆಯನ್ನು 11 ನೇ ಶತಮಾನದಲ್ಲಿ ಚಾಲುಕ್ಯರು ಕಟ್ಟಿದ್ದಾರೆ.

Leave a Reply

Your email address will not be published. Required fields are marked *

error: Content is protected !!