ಉದಯವಾಹಿನಿ, ಬೆಂಗಳೂರು : ಬಾಬಾ ಸಾಹೇಬ್ ಡಾ.ಬಿಆರ್ ಅಂಬೇಡ್ಕರ್ ಅವರನ್ನು ಚುನಾವಣೆಯಲ್ಲಿ ಸೋಲಿಸಲಾಯಿತು ಎಂಬ ವಿಚಾರವೂ ವಿಧಾನಸಭೆಯಲ್ಲಿಂದು ಆಡಳಿತಾರೂಢ ಹಾಗೂ ಪ್ರತಿಪಕ್ಷಗಳ ನಡುವೆ ಸವಾಲು ಪ್ರತಿ ಸವಾಲು ಹಾಕಿಕೊಳ್ಳುವ ಮಟ್ಟಕ್ಕೆ ತಲುಪಿ ಭಾರೀ ಕೋಲಾಹಲ ಉಂಟಾಯಿತು. ಈ ಹಂತದಲ್ಲಿ ಸ್ಪೀಕರ್ ಯು.ಟಿ.ಖಾದರ್ ಸಿಟ್ಟಾಗಿ ಸದಸ್ಯರನ್ನು ಸದನದಿಂದ ಎತ್ತಿ ಬಿಸಾಡುತ್ತೇನೆ ಎಂದು ಖಡಕ್ ಎಚ್ಚರಿಕೆ ಕೊಟ್ಟರು.ವಿಧಾನಸಭೆಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ರಾಜ್ಯಪಾಲರ ಭಾಷಣದ ಮೇಲಿನ ಚರ್ಚೆಯಲ್ಲಿ ಭಾಗವಹಿಸಿ, ದಲಿತ ಸಮುದಾಯದಕ್ಕೆ ಮೀಸಲಿಟ್ಟ ವಿಶೇಷ ಅನುದಾನ ಕುರಿತು ಗಮನ ಸೆಳೆದರು.ಮಾತು ಮುಂದುವರೆಸಿದ ಸಿಎಂ ಸಿದ್ದರಾಮಯ್ಯ ಎಸ್ ಇ ಪಿ, ಟಿ ಎಸ್ ಪಿ ಕಾನೂನು ಜಾರಿಗೆ ತಂದ ವಿಚಾರವನ್ನು ಪ್ರಸ್ತಾಪಿಸಿದಾಗ ಬಿಜೆಪಿ ಸದಸ್ಯರು ಬಿ.ಆರ್.ಅಂಬೇಡ್ಕರ್ ಅವರನ್ನು ಸೋಲಿಸಿದ್ದೇ ಕಾಂಗ್ರೆಸ್. ಅವರು ನಿಧನರಾದ ಸಂದರ್ಭದಲ್ಲಿ ಅಂತ್ಯಕ್ರಿಯೆ ಗೌರವಯುತವಾಗಿ ಆಗಿಲ್ಲ. ಜಾಗವೂ ಸಿಕ್ಕಿಲ್ಲ ಎಂದು ಪ್ರಸ್ತಾಪಿಸಿ ಆಡಳಿತಾರೂಢ ಸದಸ್ಯರನ್ನು ತರಾಟೆಗೆ ತೆಗೆದುಕೊಂಡರು.ಇದಕ್ಕೆ ಧ್ವನಿಗೂಡಿಸಿದ ಶಾಸಕ ಅರವಿಂದ ಬೆಲ್ಲದ, ’ಮಂತ್ರಿ ಮಂಡಲದಿಂದ ಹೊರ ಹಾಕಿದ್ದು ಯಾರು? ಸೋಲಿಸಿದ್ದು ಯಾರು? ಸಮಾಧಿಗೆ ಜಾಗ ಕೊಡದಿದ್ದು ಯಾರು?’ ಎಂದು ಪ್ರಶ್ನಿಸಿದರು.
ಮಧ್ಯಪ್ರವೇಶಿಸಿ ಮಾತನಾಡಿದ ಸಚಿವ ಪ್ರಿಯಾಂಕ್ ಖರ್ಗೆ, ‘೧೯೫೨ ರಲ್ಲಿ ಅಂಬೇಡ್ಕರ್ ಬರೆದ ಪತ್ರದಲ್ಲಿ ನನ್ನನ್ನು ಚುನಾವಣೆ ಯಲ್ಲಿ ಸೋಲಿಸಿದ್ದು ದಾಮೋದರ್ ಸಾವರ್ಕರ್ ಎಂದು ಬರೆದಿದ್ದಾರೆ ಎಂದರು. ಅಲ್ಲದೆ ಪತ್ರ ಪ್ರದರ್ಶನ ಮಾಡಿದರೆ ರಾಜೀನಾಮೆ ಕೊಡುತ್ತೀರಾ?’ ಎಂದು ಸವಾಲು ಹಾಕಿದರು. ಈ ಸವಾಲು ಸ್ವೀಕಾರ ಮಾಡಿ ಎಂದು ಪ್ರಿಯಾಂಕ್ ಖರ್ಗೆ ಏರು ಧ್ವನಿಯಲ್ಲಿ ಪ್ರಶ್ನಿಸಿದರು. ಪತ್ರದಲ್ಲಿ ಅಂಬೇಡ್ಕರ್ ಕಾಂಗ್ರೆಸ್ ಹೆಸರು ಉಲ್ಲೇಖ ಮಾಡಿಲ್ಲ, ಬದಲಾಗಿ ಸಾವರ್ಕರ್ ಹೆಸರು ಬರೆದಿದ್ದಾರೆ. ಇದನ್ನು ಸಾಬೀತು ಮಾಡುತ್ತೇವೆ ಎಂದರು. ಇದರಿಂದಾಗಿ ಸದನದಲ್ಲಿ ಬಿಜೆಪಿ ಮತ್ತು ಕಾಂಗ್ರೆಸ್ ಸದಸ್ಯರ ನಡುವೆ ತೀವ್ರ ಮಾತಿನ ಜಟಾಪಟಿಗೆ ಕಾರಣವಾಯಿತು.
