ಉದಯವಾಹಿನಿ, ಬೆಂಗಳೂರು: ಗಡಿ ಮತ್ತು ಭಾಷಾ ವಿವಾದವನ್ನು ಪದೇ ಪದೇ ಕೆಣಕಿ ಸ್ವಾಭಿಮಾನಕ್ಕೆ ಧಕ್ಕೆ ತರುತ್ತಿದ್ದ ಮಹಾರಾಷ್ಟ್ರ ಏಕೀಕರಣ ಸಮಿತಿ( ಎಂಇಎಸ್‌‍)ಯವರ ಅಟಾಟೋಪಗಳಿಗೆ ಕಡಿವಾಣ ಹಾಕುವಂತೆ ಒತ್ತಾಯಿಸಿ ವಿವಿಧ ಕನ್ನಡಪರ ಸಂಘಟನೆಗಳು ಕರೆ ನೀಡಿದ್ದ ಕರ್ನಾಟಕ ಬಂದ್‌ ಬಹುತೇಕ ಶಾಂತಿಯುತವಾಗಿ ನಡೆದಿದ್ದು, ಕನ್ನಡಿಗರು ಮತ್ತು ಕರ್ನಾಟಕವನ್ನು ಕೆಣಕಿದರೆ ಹುಷಾರ್‌ ಎಂಬ ಸಂದೇಶವನ್ನು ರವಾನಿಸಲಾಯಿತು. ಕನ್ನಡ ಸಂಘಟನೆಗಳ ಒಕ್ಕೂಟದಿಂದ ಕರೆ ನೀಡಿದ್ದ ಬಂದ್‌ಗೆ ಕೆಲವು ಕಡೆ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾದರೆ, ಇನ್ನು ಕೆಲವು ಕಡೆ ನೀರಸ ಪ್ರತಿಕ್ರಿಯೆ ಕಂಡು ಬಂದಿತು. ಹಲವು ಜಿಲ್ಲೆಗಳಲ್ಲಿ ದೈನಂದಿನ ಜೀವನ ಸಹಜ ಸ್ಥಿತಿಯಲ್ಲೇ ಇತ್ತು. ಬಂದ್‌ಗೂ ನಮಗೂ ಸಂಬಂಧವೇ ಇಲ್ಲ ಎನ್ನುವಂತಹ ವಾತಾವರಣವೂ ಕಂಡುಬಂದಿತು.ಆಸ್ಪತ್ರೆ, ಮೆಡಿಕಲ್‌‍, ಹಾಲು, ಅಗತ್ಯವಸ್ತುಗಳು, ಮೆಟೋ, ಪೆಟೋಲ್‌ ಬಂಕ್‌, ಹೋಟೆಲ್‌‍, ಎಪಿಎಂಸಿ, ಪೀಣ್ಯ ಕೈಗಾರಿಕಾ ಪ್ರದೇಶದಲ್ಲಿ ಕೈಗಾರಿಕೆಗಳು ಎಂದಿನಂತೆ ಕಾರ್ಯ ನಿರ್ವಹಿಸಿದವು. ಓಲಾ, ಊಬರ್‌ ಟ್ಯಾಕ್ಸಿ , ಆಟೋಗಳು ನೈತಿಕ ಬೆಂಬಲ ನೀಡಿದ್ದವು.
ಕರ್ನಾಟಕದಲ್ಲಿ ಎಂಇಎಸ್‌‍ ನಿಷೇಧ, ಮೇಕೆದಾಟು, ಕಳಸಾ ಬಂಡೂರಿ ಯೋಜನೆಗೆ ಶೀಘ್ರ ಅನುಮತಿ ಸೇರಿದಂತೆ ನಾಡು-ನುಡಿ, ನೆಲ-ಜಲ ವಿಷಯವಾಗಿ ಕನ್ನಡ ಒಕ್ಕೂಟಗಳು ಶನಿವಾರ ಕರ್ನಾಟಕ ಬಂದ್‌ ಹಮಿಕೊಂಡಿದ್ದವು. ಬೆಳಗ್ಗೆ 10.30ಕ್ಕೆ ಬೆಂಗಳೂರಿನ ಟೌನ್‌ ಹಾಲ್‌ನಿಂದ ಫ್ರೀಡಂ ಪಾರ್ಕ್‌ವರೆಗೂ ಪ್ರತಿಭಟನಾ ಮೆರವಣಿಗೆ ನಡೆಯಿತು.ರಾಜಧಾನಿ ಬೆಂಗಳೂರಿನಲ್ಲಿ ಆರಂಭದಲ್ಲೇ ನೀರಸ ಪ್ರತಿಕ್ರಿಯೆ ವ್ಯಕ್ತವಾಗಿತ್ತು. ಬೆಳಗ್ಗೆಯಿಂದಲೇ ಸಾರ್ವಜನಿಕರ ಸಂಚಾರ ಎಂದಿನಂತಿದ್ದು, ಆಟೋ, ಬಸ್‌‍ಗಳು ರಸ್ತೆಗಿಳಿದಿದ್ದವು. ಬಂದ್‌ ಯಶಸ್ಸಿಗಾಗಿ ಸಾರ್ವಜನಿಕರು ಹಾಗೂ ವ್ಯಾಪಾರಿಗಳ ಬಳಿ ಕನ್ನಡ ಪರ ಸಂಘಟನೆಗಳು ಮನವಿ ಮಾಡಿದ್ದವು. ಆದರೆ ಬಹುತೇಕ ಸಂಘಟನೆಗಳಿಂದ ನೈತಿಕ ಬೆಂಬಲವಷ್ಟೇ ದೊರೆತಿರುವುದರಿಂದ ಎಂದಿನಂತೆಯೇ ಸಾರ್ವಜನಿಕರು, ಸಾರಿಗೆ ವಾಹನಗಳ ಸಂಚಾರ ಆರಂಭವಾಗಿತ್ತು.

Leave a Reply

Your email address will not be published. Required fields are marked *

error: Content is protected !!