ಉದಯವಾಹಿನಿ, ಕೆಂಗೇರಿ: ಬೆಂಗಳೂರು ದಕ್ಷಿಣ ತಾಲೂಕು ಕೆಂಗೇರಿ ಹೋಬಳಿ ಶ್ರೀ ಕ್ಷೇತ್ರ ಆನೆಪಾಳ್ಯದಲ್ಲಿ ಶ್ರೀ ಶನೈಶ್ಚರ ಸ್ವಾಮಿ ದೇವಾಲಯ ಟ್ರಸ್ಟ್ ವತಿಯಿಂದ ಆಯೋಜಿಸಿದ್ದ ೩೭ನೇ ವರ್ಷದ ವಾರ್ಷಿಕೋತ್ಸವ ಹಾಗೂ ಜಾತ್ರಾ ಮಹೋತ್ಸವ ಅತ್ಯಂತ ಸಡಗರ ಸಂಭ್ರಮ ಹಾಗೂ ವಿಜೃಂಭಣೆಯಿಂದ ಭಕ್ತರ ಸಮ್ಮುಖದಲ್ಲಿ ನೆರವೇರಿತು.
ದೈವ ಗುರು ಹಾಗೂ ಧರ್ಮದರ್ಶಿಗಳಾದ ಲಕ್ಷ್ಮಣಪ್ಪ ರವರ ದೈವಾಜ್ಞೆಯಂತೆ ದೊಡ್ಡ ಅರಸಿನಕೆರೆ ಶ್ರೀ ಕ್ಷೇತ್ರ ನಂದಿ ಬಸಣ್ಣವರ ಕೃಪಾಶೀರ್ವಾದದೊಂದಿಗೆ ಕಾರ್ಯಕ್ರಮ ಆಯೋಜಿಸಲಾಗಿತ್ತು.
ಜಾತ್ರಾ ಮಹೋತ್ಸವದ ಅಂಗವಾಗಿ ಶ್ರೀ ಕ್ಷೇತ್ರದ ಶನೈಶ್ಚರ ಸ್ವಾಮಿಗೆ ತೈಲಾಭಿಷೇಕ, ವಿಶೇಷ ಪುಷ್ಪಲಂಕಾರ, ಷೋ ಡೋಪಚಾರ ಪೂಜೆ, ತಿಲಹೋಮ, ಪೂರ್ಣಾಹುತಿ ಸರ್ಪೋಚಾರ ಪೂಜೆ,ಮಂಗಳವಾದ್ಯ ಜಾನಪದ ಕಲಾ ತಂಡಗಳೊಂದಿಗೆ ಶ್ರೀ ಶನೈಶ್ಚರ ಸ್ವಾಮಿ, ಶ್ರೀ ನಂದಿ ಬಸವಣ್ಣ, ಶ್ರೀ ಛಾಯಾದೇವಿ, ಶ್ರೀ ಮುನೇಶ್ವರ ಸ್ವಾಮಿ, ಶ್ರೀ ಮಹೇಶ್ವರಮ್ಮ ದೇವಿಯ ಸಹಿತ ಗಂಗಾ ಪೂಜೆಯೊಂದಿಗೆ ಗ್ರಾಮದ ರಾಜ ಬೀದಿಯಲ್ಲಿ ಮೆರವಣಿಗೆಯೊಂದಿಗೆ ಆಲಯ ಪ್ರವೇಶ ಹಾಗೂ ಅಷ್ಟ ದಿಕ್ಪಾಲಕರ ಬಲಿ ಪೂಜೆ, ಕು ಷ್ಮಾಂಡ ಬಲಿ, ಕದಳಿ ಛೇದನ ನಂತರ ಮಹಾ ಮಂಗಳಾರತಿ ಪ್ರಸಾದ ವಿನಿಯೋಗ ಹಮ್ಮಿಕೊಳ್ಳಲಾಗಿತ್ತು.
ಬೆಂಗಳೂರು ನಗರ ಜಿಲ್ಲಾ ಕಾಂಗ್ರೆಸ್ ಸಮಿತಿಯ ಮಾಜಿ. ಪ್ರಧಾನ ಕಾರ್ಯದರ್ಶಿ ಬಿ. ಆರ್. ಶಿವಮಾದಯ್ಯ ಜಾತ್ರಾ ಮಹೋತ್ಸವದಲ್ಲಿ ಪಾಲ್ಗೊಂಡು ಮಾತನಾಡಿ ನಮ್ಮ ಕಲೆ ಸಾಹಿತ್ಯ ಸಂಸ್ಕೃತಿ ಪರಂಪರೆ ಇತಿಹಾಸದ ಭಾಗವಾಗಿರುವ ಧಾರ್ಮಿಕ ಆಚರಣೆಗಳು ಸಮಾಜದ ಸಮುದಾಯಗಳ ನಡುವೆ ಪ್ರೀತಿ ವಿಶ್ವಾಸ ಬಾಂಧವ್ಯ ವೃದ್ಧಿಸುವಲ್ಲಿ ಮಹತ್ವದ ಪಾತ್ರವಹಿಸುತ್ತಿವೆ ಎಂದರು. ಧರ್ಮದರ್ಶಿ ರಾಮಪ್ಪ ಎಂ ಮಾತನಾಡಿ ಲೋಕ ಕಲ್ಯಾಣಕ್ಕಾಗಿ ಹಲವಾರು ವರ್ಷಗಳಿಂದ ಪೂಜಾ ಕೈಂಕರ್ಯಗಳನ್ನು ನಡೆಸಿಕೊಂಡು ಬರಲಾಗುತ್ತಿದ್ದು, ಗ್ರಾಮದ,ಸುತ್ತಮುತ್ತಲ ಬಡಾವಣೆಗಳ ನಾಗರೀಕರ,ಭಕ್ತಾದಿಗಳ ಧಾರ್ಮಿಕ ಶ್ರದ್ಧಾ ಕೇಂದ್ರವಾಗಿದೆ ಎಂದರು.
ಎಚ್. ಗೊಲ್ಲಹಳ್ಳಿ ಗ್ರಾಮ ಪಂಚಾಯತಿ ಮಾಜಿ ಅಧ್ಯಕ್ಷ ಈರಯ್ಯ, ಕಾಂಗ್ರೆಸ್ ಮುಖಂಡ ಅಮೃತ್ ಗೌಡ, ಸಮಾಜ ಸೇವಕ ದೊಡ್ಡಿಪಾಳ್ಯ ಕೃಷ್ಣಪ್ಪ, ಮುನಿರಾಜು ಗಂಗಪ್ಪ ಮತ್ತಿತರರು ಉಪಸ್ಥಿತರಿದ್ದರು, ಇದೇ ವೇಳೆ ಸಾವಿರಾರು ಸಂಖ್ಯೆಯಲ್ಲಿ ಜಾತ್ರಾ ಮಹೋತ್ಸವಕ್ಕೆಆಗಮಿಸಿದ್ದ ಭಕ್ತಾದಿಗಳಿಗೆ ಅನ್ನ ಸಂತರ್ಪಣೆ ಏರ್ಪಡಿಸಲಾಗಿತ್ತು.. ಸಂಜೆ ಶ್ರೀ ಶಾಂತ ಮೂರ್ತಿ ಶನಿ ದೇವರ ಕೃಪಾಪೋಷಿತ ನಾಟಕ ಮಂಡಳಿ ಅವರಿಂದ ರಾಜಾಸತ್ಯವ್ರತ ಅಥವಾ ಶನಿ ಪ್ರಭಾವ ಎಂಬ ಪೌರಾಣಿಕ ನಾಟಕವನ್ನು ಏರ್ಪಡಿಸಲಾಗಿತ್ತು.
