ಉದಯವಾಹಿನಿ, ಮೈಸೂರು: ಅರಣ್ಯ ಭೂಮಿ, ಗೋಮಾಳ, ನಗರ ಪ್ರದೇಶದಿಂದ 10 ಕಿ.ಮಿ ವ್ಯಾಪ್ತಿಯ ತುಂಡು ಭೂಮಿಯಲ್ಲಿ ಕಳೆದ 50-60ಕ್ಕೂ ಹೆಚ್ಚು ವರ್ಷಗಳಿಂದ ಸಾಗುವಳಿ ಮಾಡುತ್ತಿರುವ ಬಡ ಸಾಗುವಳಿ ರೈತರಿಗೆ ಸಾಗುವಳಿ ಪತ್ರ ನೀಡಬೇಕೆಂದು ಒತ್ತಾಯಿಸಿ ಕರ್ನಾಟಕ ಪ್ರಾಂತ ರೈತ ಸಂಘದಿಂದ ಮೈಸೂರು ತಹಸೀಲ್ದಾರ್ ಕಚೇರಿ ಮುಂಭಾಗ ಪ್ರತಿಭಟನೆ ನಡೆಸಲಾಯಿತು.

ಕಳೆದ 50-60 ವರ್ಷಗಳಿಂದ ಗೋಮಾಳ, ಗುಂಡು ತೋಪು, ಅರಣ್ಯ ಭೂಮಿಗಳಲ್ಲಿ ಬಡ ಬಗರ್ ಹುಕುಂ ಸಾಗುವಳಿದಾರರು ಉಳುಮೆ ಮಾಡುತ್ತಾ ಜೀವನ ನಡೆಸುತ್ತಾ ಬಂದಿದ್ದಾರೆ. ಬಡ ಸಾಗುವಳಿದಾರರಿಗೆ ಸಾಗುವಳಿ ಪತ್ರ ನೀಡದೆ ಕಾನೂನಿನ ತೊಡÀಕಿನ ನೆಪ ಹೇಳಿ ವಂಚಿಸಲಾಗುತ್ತಿದೆ. ಆದರೆ, ಕೈಗಾರಿಕೆಗಳಿಗೆ, ಸಂಘ, ಸಂಸ್ಥೆಗಳಿಗೆ ಮಾತ್ರ ರೈತರು ಸಾಗುವಳಿ ಮಾಡುತ್ತಿರುವ ಭೂಮಿ ನೀಡಲಾಗುತ್ತಿದೆ. ಆಗ ಅಡ್ಡಿಯಾಗದ ಕಾನೂನು ಬಡ ರೈತರಿಗೆ ಸಾಗುವಳಿ ನೀಡಲು ಅಡ್ಡಿಯಾಗುತ್ತಿರುವುದು ರೈತ ವಿರೋಧಿಯಾಗಿದೆ ಎಂದು ಕಿಡಿ ಕಾರಿದರು.
ಹಸುಗಳಿಗೆ ಗೋಮಾಳ ಇರಬೇಕೆಂಬ ಕಾರಣ ಹೇಳಿ ಸಾಗುವಳಿ ವಂಚಿಸಲಾಗುತ್ತಿದೆ. ಆದರೆ, 100 ಹಸುಗಳಿಗೆ 30 ಎಕರೆ ಜಮೀನು ಬಿಟ್ಟು ಉಳಿದ ಜಮೀನನ್ನು ರೈತರಿಗೆ ನೀಡುವ ಅವಕಾಶವಿದೆ. ಆದರೆ, ಸ್ಥಳೀಯ ಅಧಿಕಾರಿಗಳು ಇದರ ಬಗ್ಗೆ ಗಮನ ನೀಡುತ್ತಿಲ್ಲ. ಮತ್ತೊಂದೆಡೆ ಅರಣ್ಯ ಭೂಮಿಗಳಲ್ಲಿ 50-60 ವರ್ಷಗಳಿಂದ ಸಾಗುವಳಿಗೆ ಅರ್ಜಿ ಸಲ್ಲಿಸಿ ರೈತರು ವ್ಯವಸಾಯ ಮಾಡುತ್ತಿದ್ದಾರೆ. ಆದರೆ, ಅರಣ್ಯ ಇಲಾಖೆ ಇತ್ತೀಚೆಗೆ ರೈತರಿಗೆ ನೋಟೀಸ್ ನೀಡಿ ಉಳುಮೆ ಮಾಡುತ್ತಿರುವ ಭೂಮಿಗೆ ದಾಖಲೆ ಕೇಳುತ್ತಿದೆ. ಒತ್ತುವರಿ ತೆರವು ಮಾಡುವುದಾಗಿ ಬೆದರಿಕೆ ಹಾಕುತ್ತಿದ್ದಾರೆ. ನಗರದ 10 ಕಿ.ಮಿ ವ್ಯಾಪ್ತಿಯಲ್ಲಿಯೂ ಬಡ ರೈತರು ಹಲವಾರು ವರ್ಷಗಳಿಂದ ಸಾಗುವಳಿ ಮಾಡುತ್ತಾ ಬಂದಿದ್ದಾರೆ. ಆದರೆ, ಇತ್ತೀಚೆಗೆ ನಗರ ವ್ಯಾಪ್ತಿ ವಿಸ್ತರಣೆಯಾಗುತ್ತಿರುವುದು, ನಗರ ಸಭೆ, ಪುರಸಭೆಗಳು ರಚನೆಯಾಗಿರುವುದರಿಂದ ಈ ರೈತರು ಸಾಗುವಳಿಯಿಂದ ವಂಚಿತರಾಗಿದ್ದಾರೆ. ಬಡ ರೈತರಿಗೆಲ್ಲ ಈ ಭೂಮಿಯೇ ಜೀವನಾಧಾರವಾಗಿರುವುದರಿಂದ ಇವರಿಗೆ ಸಾಗುವಳಿ ಪತ್ರ ನೀಡಬೇಕು. ತಕ್ಷಣವೇ ದರಕಾಸ್ತು ಸಮಿತಿ ರಚಿಸಿ ಬಾಕಿ ಇರುವ ಅರ್ಜಿಗಳನ್ನು ವಿಲೇವಾರಿ ಮಾಡಬೇಕೆಂದು ಆಗ್ರಹಿಸಿದರು.

Leave a Reply

Your email address will not be published. Required fields are marked *

error: Content is protected !!