ಉದಯವಾಹಿನಿ, ಬೆಂಗಳೂರು: ಸಹಕಾರ ಸಚಿವ ರಾಜಣ್ಣ ಅವರ ಪುತ್ರ ಹಾಗೂ ವಿಧಾನಪರಿಷತ್ ಸದಸ್ಯ ರಾಜೇಂದ್ರ ರಾಜಣ್ಣ ಕೊಲೆ ಯತ್ನಕ್ಕೆ ರೂಪಿಸಲಾಗಿದ್ದ ಸಂಚಿನ ಮಾಹಿತಿಯುಳ್ಳ ಆಡಿಯೋವೊಂದು ಬಹಿರಂಗವಾಗಿದ್ದು, ಹಲವಾರು ಮಾಹಿತಿಗಳನ್ನು ಹೊರಹಾಕಿದೆ.
ರಾಜೇಂದ್ರ ಅವರ ಬೆಂಬಲಿಗ ರಾಖಿ ಹಾಗೂ ಸಂಚಿನ ಕುರಿತು ಸಮಗ್ರ ಮಾಹಿತಿ ಕಲೆ ಹಾಕಿದ್ದಾರೆ ಎನ್ನಲಾದ ಪುಷ್ಪ ಅವರ ನಡುವಿನ ಸಂಭಾಷಣೆಯ ಆಡಿಯೋ ಈಗ ಬಿಡುಗಡೆಯಾಗಿದೆ.
ನವೆಂಬರ್‌ನಲ್ಲಿ ರಾಜೇಂದ್ರ ಅವರ ಪುತ್ರಿಯ ಹುಟ್ಟುಹಬ್ಬದ ಸಂದರ್ಭದಲ್ಲಿ ಕೊಲೆಗೆ ತುಮಕೂರಿನ ಸೋಮ ಎಂಬಾತ ಸಂಚು ನಡೆಸಿ ತುಮಕೂರಿನ ಜಯಪುರದ ಇಬ್ಬರು ಹುಡುಗರನ್ನು ಮನೆಗೆ ಕಳುಹಿಸಿದ್ದಾಗಿ ತಿಳಿಸಲಾಗಿದೆ.
ಸೋಮ ಅವರ ಖಾತೆಗೆ ಈಗಾಗಲೇ 5 ಲಕ್ಷ ರೂ. ಹಣ ಸಂದಾಯವಾಗಿದೆ.
ಆತನ ಮೇಲೆ ನಿಗಾ ವಹಿಸಬೇಕು, ತನಿಖೆ ಮಾಡಿಸಬೇಕು ಎಂದು ಮಹಿಳೆ ಫೋನ್ ಸಂಭಾಷನೆಯಲ್ಲಿ ಸಲಹೆ ನೀಡಿದ್ದಾರೆ.ಕಾರ್ಪೆಂಟರ್ ಮನು ಎಂಬಾತನ ಖಾತೆಗೆ ಹಣ ಹಾಕಿಸಿಕೊಂಡು ಅಲ್ಲಿಂದ ನಗದು ರೂಪದಲ್ಲಿ ಸೋಮ ಪಡೆದುಕೊಳ್ಳುತ್ತಾನೆ. ಪರ್ಷಿ ಎಂಬಾತನ ಕೊಲೆಗೂ ಸೋಮ ಸಂಚು ರೂಪಿಸಿದ್ದಾನೆ. ಮಧುಗಿರಿಯ ಏಳೆಂಟು ಹುಡುಗರು ಬೆಂಗಳೂರಿನ ಕಲಾಸಿಪಾಳ್ಯದ ಇಬ್ಬರು ತಮಿಳಿಗರನ್ನು ಒಟ್ಟುಗೂಡಿಸಿ ರಾಜೇಂದ್ರ ಅವರ ಕೊಲೆಗೆ ಸಂಚು ರೂಪಿಸಲಾಗಿದೆ ಎಂದು ಮಹಿಳೆ ರಾಖಿಗೆ ತಿಳಿಸಿದ್ದಾರೆ.
