ಉದಯವಾಹಿನಿ,ಹೈದರಾಬಾದ್: ಬುರ್ಖಾ ಧರಿಸಿದ ಬಂದ ಮುಸ್ಲಿಂ ವಿದ್ಯಾರ್ಥಿನಿಯರಿಗೆ ಪರೀಕ್ಷಾ ಕೇಂದ್ರಕ್ಕೆ ಪ್ರವೇಶ ನಿರಾಕರಿಸಿದ ಘಟನೆ ತೆಲಂಗಾಣದ ಕಾಲೇಜಿನಲ್ಲಿ ನಡೆದಿದೆ. ಸಂತೋಷ್ ನಗರದಲ್ಲಿರುವ ಕೆವಿ ರಂಗಾ ರೆಡ್ಡಿ ಪದವಿ ಮಹಿಳಾ ಕಾಲೇಜಿನ ಸಿಬ್ಬಂದಿ ಶನಿವಾರ ನಡೆದ ಪರೀಕ್ಷೆಯಲ್ಲಿ ಬುರ್ಖಾಧಾರಿ ವಿದ್ಯಾರ್ಥಿನಿಯರಿಗೆ ಪ್ರವೇಶ ನಿರಾಕರಿಸಿದ್ದಾರೆ ಎಂದು ಆರೋಪಿಸಲಾಗಿದೆ. ಇದರಿಂದ ತಾವು ಸುಮಾರು ಅರ್ಧ ಗಂಟೆ ಹೊರಗೆ ಕಾಯುವಂತಾಗಿತ್ತು ಹಾಗೂ ಬುರ್ಖಾ ತೆಗೆದ ಬಳಿಕವಷ್ಟೇ ಪರೀಕ್ಷೆ ಬರೆಯಲು ಅವಕಾಶ ನೀಡಲಾಯಿತು ಎಂದು ಮುಸ್ಲಿಂ ವಿದ್ಯಾರ್ಥಿನಿಯರು ಹೇಳಿದ್ದಾರೆ.
ಇದರ ಬಳಿಕ ತೆಲಂಗಾಣ ಗೃಹ ಸಚಿವ ಮೊಹಮ್ಮದ್ ಅಲಿ ನೀಡಿದ ಹೇಳಿಕೆ ಮತ್ತೊಂದು ವಿವಾದ ಸೃಷ್ಟಿಸಿದೆ. ಮಹಿಳೆಯರು ತಮ್ಮ ದೇಹವನ್ನು ಸಾಧ್ಯವಾದಷ್ಟು ಮುಚ್ಚಿಕೊಳ್ಳಬೇಕು. ಮಹಿಳೆಯರು ಕಿರಿದಾದ ಉಡುಪು ಧರಿಸಿದ್ದಾಗ ಸಮಸ್ಯೆ ಉದ್ಭವಿಸುತ್ತದೆ ಎಂದು ಘಟನೆಗೆ ಪ್ರತಿಕ್ರಿಯೆ ನೀಡಿದ್ದಾರೆ. “ಕೆಲವು ಹೆಡ್ ಮಾಸ್ಟರ್ ಅಥವಾ ಪ್ರಿನ್ಸಿಪಾಲ್ ಇದನ್ನು ಮಾಡುತ್ತಿರಬಹುದು. ಆದರೆ ನಮ್ಮ ನೀತಿ ಸಂಪೂರ್ಣ ಜಾತ್ಯತೀತವಾದುದು. ಜನರು ತಮಗೆ ಬಯಸಿದ್ದನ್ನು ಧರಿಸಬಹುದು. ಬುರ್ಖಾ ಧರಿಸುವಂತೆ ಇಲ್ಲ ಎಂದು ಎಲ್ಲಿಯೂ ಬರೆದಿಲ್ಲ” ಎಂದು ಅವರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
