ಉದಯವಾಹಿನಿ,ಮೈಸೂರು: ಸಂಸದ ಪ್ರತಾಪ್ ಸಿಂಹಗೆ ಆಸೆ ಇದ್ದರೆ ಇನ್ನೊಂದು ಮದುವೆಯಾಗಿ, ಅದರ ಅನುಭವವನ್ನು ನಮಗೆ ಬಂದು ಹೇಳಲಿ ಎಂದು ಕಾಂಗ್ರೆಸ್ ಶಾಸಕ ತನ್ವೀರ್ ಸೇಠ್ ವ್ಯಂಗ್ಯವಾಡಿದ್ದಾರೆ. ಈ ಮೂಲಕ ಗೃಹಲಕ್ಷ್ಮೀ ಯೋಜನೆಯಿಂದ ಕುಟುಂಬದಲ್ಲಿ ಒಡಕುಂಟಾಗಿದೆ. ಮುಸ್ಲಿಮರಿಗೆ ಎರಡು ಮೂರು ಹೆಂಡತಿಯರಿರುತ್ತಾರೆ, ಆಗ ಯಾರನ್ನು ಮನೆಯ ಯಜಮಾನಿ ಎಂದು ಗುರುತಿಸುತ್ತೀರಿ ಎಂಬ ಪ್ರತಾಪ್ ಸಿಂಹ ಹೇಳಿಕೆಗೆ ತಿರುಗೇಟು ನೀಡಿದರು. ಮೈಸೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಹೊಂದಾಣಿಕೆ ರಾಜಕೀಯದ ಬಗ್ಗೆಯೂ ಮಾತನಾಡಿದರು. ಅಡ್ಜೆಸ್ಟ್‌ಮೆಂಟ್ ರಾಜಕೀಯ ನನಗೆ ಗೊತ್ತಿಲ್ಲ.
ಆ ರೀತಿ ಮಾಡಿರುವವರಿಗೆ ಆ ವಿಚಾರ ಗೊತ್ತು. ಅಡ್ಜೆಸ್ಟ್ ಮೆಂಟ್ ಮಾಡ್ಕೊಂಡು ಒಬ್ಬರನ್ನು ತುಳಿಯಲು ಮತ್ತೊಬ್ಬರನ್ನು ಬಳಸಿಕೊಳ್ಳೋದು ಸರಿಯಲ್ಲ. ಅನುಭವ ಇರುವವರು ಈ ವಿಚಾರ ಪ್ರಸ್ತಾಪ ಮಾಡಿದ್ದಾರೆ ಎಂದು ಪ್ರತಾಪ್ ಸಿಂಹ ವಿರುದ್ಧ ಕಿಡಿಕಾರಿದರು. ಇನ್ನು, ರಾಜ್ಯದಲ್ಲಿ ವಿದ್ಯುತ್ ದರ ಹೆಚ್ಚಳಕ್ಕೆ ಈ ಹಿಂದಿನ ಬಿಜೆಪಿ ಸರ್ಕಾರವೇ ನೇರ ಕಾರಣ. ವಿದ್ಯುತ್ ದರ ಹೆಚ್ಚಳಕ್ಕೆ ಕೆಇಆರ್‌ಸಿ ಮಾಡಿದ್ದ ಶಿಫಾರಸ್ಸಿಗೆ ಈ ಹಿಂದಿನ ಬಿಜೆಪಿ ಸರ್ಕಾರ ಒಪ್ಪಿಗೆ ಸೂಚಿಸಿದೆ. ಬಿಜೆಪಿಯರಿಗೆ ಚುನಾವಣೆಯಲ್ಲಿ ಸೋಲುವುದು ಖಚಿತವಾಗಿದ್ದರಿಂದ ವಿದ್ಯುತ್ ದರ ಹೆಚ್ಚಳ ಪ್ರಸ್ತಾಪಕ್ಕೆ ಒಪ್ಪಿಗೆ ಸೂಚಿಸಿದ್ದಾರೆ. ಈ ವಿಚಾರ ಮೇ 12ರಂದು ಪ್ರಕಟವಾಗಿದೆ. ಮೇ 13ರಂದು ಚುನಾವಣಾ ಫಲಿತಾಂಶ ಹೊರಬಿದ್ದಾಗ ಶಾಕ್ ಕೊಡುವ ಕೆಲಸ ಮಾಡಿದ್ದಾರೆ ಎಂದರು.
