ಉದಯವಾಹಿನಿ,ಇಂಫಾಲ್: ಕಳೆದ ಕೆಲವು ದಿನಗಳಿಂದ ಮಣಿಪುರದಲ್ಲಿ ಕುಕಿ – ಮೈತೇಯಿ ಸಮುದಾಯಗಳ ನಡುವಿನ ಹಿಂಸಾಚಾರ ತೀವ್ರ ಸ್ವರೂಪ ಪಡೆದುಕೊಂಡಿದ್ದು, ರಾಜಕೀಯ ನಾಯಕರ ನಿವಾಸವನ್ನು, ಆಸ್ತಿಪಾಸ್ತಿಗಳನ್ನು ಟಾರ್ಗೆಟ್ ಮಾಡಲಾಗುತ್ತಿದೆ. ಪ್ರಸ್ತುತ ಕಾನೂನು ಮತ್ತು ಸುವ್ಯವಸ್ಥೆ ಪರಿಸ್ಥಿತಿ ಹದಗೆಟ್ಟಿದ್ದು, ಶಾಂತಿ ಸ್ಥಾಪನೆ ಮಾಡಲು ಕೇಂದ್ರವು ಶ್ರಮಿಸುತ್ತಿದೆ. ಈ ನಡುವೆ ಬಿಷ್ಣುಪುರ್ ಜಿಲ್ಲೆಯ ಕ್ವಾಕ್ತಾ ಮತ್ತು ಚುರಾಚಂದ್‌ಪುರ ಜಿಲ್ಲೆಯ ಕಾಂಗ್‌ವಾಯ್‌ನಲ್ಲಿ ನಿನ್ನೆ ರಾತ್ರಿ ಸ್ವಯಂಚಾಲಿತ ಶಸ್ತ್ರಾಸ್ತ್ರಗಳನ್ನು ಹಾರಿಸಲಾಗಿದ್ದು, ಇಂದು ಬೆಳಗಿನ ಜಾವದವರೆಗೂ ನಿರಂತರ ಗುಂಡಿನ ದಾಳಿಗಳು ವರದಿಯಾಗಿವೆ. ಅಡ್ವಾನ್ಸ್ ಆಸ್ಪತ್ರೆ ಬಳಿಯ ಅರಮನೆ ಕಾಂಪೌಂಡ್ ನಲ್ಲಿ ಬೆಂಕಿ ಹಚ್ಚುವ ಯತ್ನ ನಡೆದಿದೆ.
ಸುಮಾರು ಒಂದು ಸಾವಿರಕ್ಕೂ ಹೆಚ್ಚು ಜನರ ಗುಂಪು ಜೊತೆಯಾಗಿ ಬೆಂಕಿ ಹಚ್ಚಿ ವಿಧ್ವಂಸಕ ಕೃತ್ಯಕ್ಕೆ ಪ್ರಯತ್ನಿಸಿತು. ಗುಂಪನ್ನು ಚದುರಿಸಲು ಆರ್‌ಎಎಫ್ ಅಶ್ರುವಾಯು ಮತ್ತು ರಬ್ಬರ್ ಬುಲೆಟ್‌ಗಳನ್ನು ಹಾರಿಸಿತು. ಇದರಲ್ಲಿ ಇಬ್ಬರು ನಾಗರಿಕರು ಗಾಯಗೊಂಡರು. ವಿದೇಶಾಂಗ ವ್ಯವಹಾರಗಳ ರಾಜ್ಯ ಖಾತೆ ಸಚಿವ ಆರ್. ಕೆ ರಂಜನ್ ಸಿಂಗ್ ಮನೆ ಮೇಲೆ ದಾಳಿ ನಡೆಸಲಾಗಿದೆ. 1200 ಜನರ ಗುಂಪೊಂದು ಗುರುವಾರ ಸಂಜೆ ಪೆಟ್ರೋಲ್ ಬಾಂಬ್ ಎಸೆದು ಸಚಿವರ ಮನೆಗೆ ಬೆಂಕಿ ಹಚ್ಚಿದೆ. ನಿವಾಸದ ಕಾವಲಿಗಿದ್ದ 22 ಭದ್ರತಾ ಸಿಬ್ಬಂದಿಗಳು ಸಾವಿರಕ್ಕೂ ಹೆಚ್ಚು ಜನರನ್ನು ನಿಯಂತ್ರಿಸಲು ಸಾಧ್ಯವಾಗದೇ, ಪರದಾಡಿದ್ದಾರೆ. ಈ ವೇಳೆ ಜನರು ಹಾಗೂ ಸಿಬ್ಬಂದಿಗಳ ನಡುವೆ ಭಾರೀ ಘರ್ಷಣೆ ನಡೆದಿದೆ.
