ಉದಯವಾಹಿನಿ, ನವದೆಹಲಿ: ಭಾರತ ನಡೆಸಿದ ಆಪರೇಷನ್ ಸಿಂಧೂರ್ ದಾಳಿಯಲ್ಲಿ ನಿಷೇಧಿತ ಭಯೋತ್ಪಾದಕ ಸಂಘಟನೆಗಳಾದ ಲಷ್ಕರ್-ಎ-ತೈಬಾ ಮತ್ತು ಜೈಶ್-ಎ-ಮೊಹಮ್ಮದ್ ಸೇರಿದ ಕುಖ್ಯಾತ ಐದು ಮಂದಿ ಬಯೋತ್ಪಾದಕರು ಸಾನನ್ನಪ್ಪಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಅವರಲ್ಲಿ ಒಬ್ಬರು ಎಲ್‌ಇಟಿ ಮುದಾಸರ್ ಖಾದಿಯಾನ್ ಖಾಸ್ ಅಲಿಯಾಸ್ ಮುದಾಸರ್ ಅಲಿಯಾಸ್ ಅಬು ಜುಂದಾಲ್ ಎಂದು ತಿಳಿದುಬಂದಿದೆ. ಈತ ಮುರಿಡೈಯಲ್ಲಿರುವ ಮರ್ಕಜ್ ತೈಬಾದ ಉಸ್ತುವಾರಿ ವಹಿಸಿದ್ದ ಎಂದು ತಿಳಿಸಲಾಗಿದೆ. ಪಾಕಿಸ್ತಾನ ಸೇನಾ ಮುಖ್ಯಸ್ಥ ಅಸಿಮ್ ಮುನೀರ್ ಮತ್ತು ಪಂಜಾಬ್ ಮುಖ್ಯಮಂತ್ರಿ ಮರ್ಯಮ್ ನವಾಜ್ ಪರವಾಗಿ ಅವರ ಅಂತ್ಯಕ್ರಿಯೆಯ ಪ್ರಾರ್ಥನೆಯನ್ನು ಸರ್ಕಾರಿ ಶಾಲೆಯಲ್ಲಿ ನಡೆಸಲಾಗಿದೆ.
ಪಾಕ್ ಸೇನೆಯ ಲೆಫ್ಟಿನೆಂಟ್ ಜನರಲ್ ಮತ್ತು ಪಂಜಾಬ್ ಪೊಲೀಸ್ ಐಜಿ ಪ್ರಾರ್ಥನಾ ಸಮಾರಂಭದಲ್ಲಿ ಭಾಗವಹಿಸಿದ್ದರು. ಜೆಇಎಂ ಸಂಸ್ಥಾಪಕ ಮೌಲಾನಾ ಮಸೂದ್ ಅಜರ್ ಅವರ ಹಿರಿಯ ಸಹೋದರ ಹಫೀಜ್ ಮುಹಮ್ಮದ್ ಜಮೀಲ್ ಕೂಡ ಬಲಿಯಾಗಿದ್ದು ಈತ ದಾಳಿಯಲ್ಲಿ ಗಾಯಗೊಂಡ ಬಹವಲ್ಪುರದ ಮರ್ಕಜ್ ಸುಭಾನ್ ಅಲ್ಲಾಹ್ಯನ ಉಸ್ತುವಾರಿ ವಹಿಸಿದ್ದರು.
ಯುವಕರಿಗೆ ಗ್ರವಾದಕ್ಕೆ ಪ್ರಚೋದನೆ ಮತ್ತು ಜೆಇಎಂಗೆ ನಿಧಿಸಂಗ್ರಹಣೆಯಲ್ಲಿ ಅವರು ಸಕ್ರಿಯವಾಗಿ ತೊಡಗಿಸಿಕೊಂಡಿದ್ದರು ಎಂದು ಮೂಲಗಳು ತಿಳಿಸಿವೆ. ಉಸ್ತಾದ್ ಜಿ, ಮೊಹಮ್ಮದ್ ಸಲೀಮ್ ಮತ್ತು ಘೋಸಿ ಸಹಾಬ್ ಎಂಬ ಅಡ್ಡ ಹೆಸರುಗಳನ್ನು ಹೊಂದಿದ್ದ ಮತ್ತು ಜೆಇಎಂ ಜೊತೆ ಸಂಬಂಧ ಹೊಂದಿದ್ದ ಮೊಹಮ್ಮದ್ ಯೂಸುಫ್ ಅಜರ್ ನನ್ನು ಕೂಡ ಸದೆಬಡಿಯಲಾಗಿದೆ.
