ಉದಯವಾಹಿನಿ, ಬೆಂಗಳೂರು: ಮುಖ್ಯಮಂತ್ರಿಯವರ ರಾಜಕೀಯ ಕಾರ್ಯದರ್ಶಿ ಸ್ಥಾನದಿಂದ ಕೆ.ಗೋವಿಂದರಾಜ್ ಅವರನ್ನು ಹುದ್ದೆಯಿಂದ ಬಿಡುಗಡೆಗೊಳಿಸಿದ್ದರಿಂದ ಸಿದ್ದರಾಮಯ್ಯನವರು ಕಾಲ್ತುಳಿತ ಪ್ರಕರಣದಲ್ಲಿ ಹೊಣೆಗಾರರು ಎಂದು ಬಿಜೆಪಿ ಶಾಸಕ ಸುನಿಲ್ ಕುಮಾರ್ ಹೇಳಿದ್ದಾರೆ. ವಿಧಾನಸೌಧದಲ್ಲಿ ಆರ್‌ಸಿಬಿ ವಿಜಯೋತ್ಸವ ಆಚರಣೆಗೆ ಅವಕಾಶ ನೀಡಿದರೆ ಬಂದೋಬಸ್ತ್‌ಗೆ ಸಮಸ್ಯೆಯಾಗುತ್ತದೆ ಎಂದು ವಿಧಾನಸೌಧದ ಡಿಸಿಪಿ ಕರಿಬಸವನಗೌಡ ಅವರು ಆಡಳಿತ ಮತ್ತು ಸಿಬ್ಬಂದಿ ಸುಧಾರಣಾ ಇಲಾಖೆ(DPAR) ಕಾರ್ಯದರ್ಶಿ ಸತ್ಯವತಿ ಅವರಿಗೆ ಬರೆದ ಪತ್ರ ಬಹಿರಂಗವಾದ ಬೆನ್ನಲ್ಲೇ ಸುನಿಲ್ ಕುಮಾರ್ ಅವರು ಎಕ್ಸ್‌ನಲ್ಲಿ ಸಿದ್ದರಾಮಯ್ಯ ವಿರುದ್ಧ ಕಿಡಿಕಾರಿದ್ದಾರೆ.
ಪೋಸ್ಟ್‌ನಲ್ಲಿ ಏನಿದೆ?: ನಿಮ್ಮ ಸಯಾಮಿಯಂತೆ ಸದಾ ಅಂಟಿಕೊಂಡೇ ಇರುತ್ತಿದ್ದ ಕೆ.ಗೋವಿಂದರಾಜ್ ಅವರನ್ನು ತಕ್ಷಣದಿಂದ ಜಾರಿಗೆ ಬರುವಂತೆ ರಾಜಕೀಯ ಕಾರ್ಯದರ್ಶಿ ಸ್ಥಾನದಿಂದ ಬಿಡುಗಡೆಗೊಳಿಸಿದ್ದೇಕೆ…? ಗೋವಿಂದರಾಜ್ ಕೊಟ್ಟ ಸಲಹೆ ಆಧರಿಸಿ ಈ ಕಾರ್ಯಕ್ರಮ ನಡೆದಿದೆ ಎಂದಾದರೆ ಅದಕ್ಕೆ ನೀವೇ ಹೊಣೆಗಾರರಾಗುತ್ತೀರಿ ಎಂಬ ಭಯಕ್ಕಾ? ನಿಮ್ಮ ಪಕ್ಕದಲ್ಲೇ ಕುಳಿತು ಈ ನರಹತ್ಯೆಯ ಚಿತ್ರಕತೆ ಬರೆದರೆಂಬ ಕಾರಣಕ್ಕಾ..? ಸಾಲು ಸಾಲು ಹೆಣಗಳು ಬಿದ್ದ ಮೇಲೂ ಮಸಾಲೆ ದೋಸೆ ಮೆಲ್ಲುವುದಕ್ಕೆ ಕರೆದೊಯ್ದರು ಎಂಬ ಕಾರಣಕ್ಕೋ? ಅಥವಾ ಇದೆಲ್ಲವನ್ನು ಮೀರಿದ ಉನ್ನತ ಸಲಹೆಗಾಗಿಯೋ..? ವಿಧಾನಸೌಧದ ಗ್ರ್ಯಾಂಡ್ ಸ್ಟೆಪ್ ಮೇಲೆ ಸನ್ಮಾನ ಕಾರ್ಯಕ್ರಮ ಬೇಡ, ವಿಜಯೋತ್ಸವವೂ ಬೇಡ ಎಂದು ಡಿಪಿಎಆರ್ ಕಾರ್ಯದರ್ಶಿಗೆ ಪೊಲೀಸರು ಪತ್ರ ಬರೆದಿದ್ದರು.
