ಉದಯವಾಹಿನಿ, ನವದೆಹಲಿ: ಬಾಹ್ಯಾಕಾಶ ಪ್ರಯಾಣದಲ್ಲಿ ಮೈಲಿಗಲ್ಲು ಸಾಧಿಸಲು ಭಾರತ ಸಜ್ಜಾಗಿದೆ. ಗಗನಯಾತ್ರಿ ಅಥವಾ ನಿಯೋಜಿತ ಗಗನಯಾತ್ರಿ ಗ್ರೂಪ್ ಕ್ಯಾಪ್ಟನ್ ಶುಭಾಂಶು ಶುಕ್ಲಾ ಜೂನ್ 10ರಂದು ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣಕ್ಕೆ ಹಾರಲಿದ್ದಾರೆ. ಶುಕ್ಲಾ ಅವರೊಂದಿಗೆ ಮೂವರು ಗಗನಯಾನಿಗಳು ಸಹ ಫ್ಲೋರಿಡಾದಲ್ಲಿರುವ ನಾಸಾದ ಕೆನಡಿ ಬಾಹ್ಯಾಕಾಶ ಕೇಂದ್ರದಿಂದ ಪ್ರಯಾಣ ಬೆಳೆಸಲಿದ್ದಾರೆ.
ಇದಕ್ಕಾಗಿ ಎಲಾನ್ ಮಸ್ಕ್ ನೇತೃತ್ವದ ಸ್ಪೇಸ್-ಎಕ್ಸ್ (SpaceX) ಸಂಸ್ಥೆಯು ʻಡ್ರ್ಯಾಗನ್ʼ (Dragon) ಎಂಬ ಬಾಹ್ಯಾಕಾಶ ನೌಕೆಯನ್ನೂ ಸಿದ್ಧಪಡಿಸಿದ್ದು, ಉಡಾವಣೆಗೆ ಸಜ್ಜುಗೊಳಿಸಲಾಗಿದೆ. ಈ ಡ್ರ್ಯಾಗನ್ ನೌಕೆಯನ್ನು ಸ್ಪೆಸ್-ಎಕ್ಸ್ ಮರುಬಳಕೆ ಮಾಡಬಹುದಾದ ಫಾಲ್ಕನ್-9 ರಾಕೆಟ್‌ನಲ್ಲಿ ಸಂಯೋಜಿಸಿದೆ. ಆ್ಯಕ್ಸಿಯಂ-4ʼ ಕಾರ್ಯಕ್ರಮದ ಭಾಗವಾಗಿ ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣಕ್ಕೆ ತೆರಳುತ್ತಿರುವ ಶುಕ್ಲಾ ಅವರೊಂದಿಗೆ, ಕಮಾಂಡರ್ ಪೆಗ್ಗಿ ವಿಟ್ಸನ್, ಹಂಗರಿಯ ಟಿಬೊರ್ ಕಾಪು ಹಾಗೂ ಪೋಲಂಡ್‌ನ ಸ್ಲಾವೋಸ್ ಯು.ವಿವ್‌ಕಿ ಕೂಡ ಪಯಣಿಸಲಿದ್ದಾರೆ. ಒಟ್ಟು 14 ದಿನಗಳ ಕಾರ್ಯಾಚರಣೆ ಇದಾಗಿದೆ. ಅಂದಾಜು 28 ಗಂಟೆ ಪ್ರಯಾಣದ ಬಳಿಕ, ಜೂನ್ 11ರಂದು ಭಾರತೀಯ ಕಾಲಮಾನ ರಾತ್ರಿ 10.30ರ ವೇಳೆಗೆ ನಾಲ್ವರು ಗಗನಯಾನಿಗಳು ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣ ತಲುಪಲಿದ್ದಾರೆ.
