ಉದಯವಾಹಿನಿ,ಹೊಸದಿಲ್ಲಿ: ಸ್ವಾತಂತ್ರ್ಯ ಸೇನಾನಿ ನೇತಾಜಿ ಸುಭಾಷ್ ಚಂದ್ರ ಬೋಸ್ ಅವರು ಬದುಕಿದ್ದರೆ ದೇಶ ವಿಭಜನೆಯಾಗುತ್ತಿರಲಿಲ್ಲ ಎಂದು ರಾಷ್ಟ್ರೀಯ ಭದ್ರತಾ ಸಲಹೆಗಾರ (ಎನ್‌ಎಸ್‌ಎ) ಅಜಿತ್ ದೋವಲ್ ಹೇಳಿದ್ದಾರೆ. ಅಸೋಸಿಯೇಟೆಡ್ ಚೇಂಬರ್ಸ್ ಆಫ್ ಕಾಮರ್ಸ್ ಆ್ಯಂಡ್ ಇಂಡಸ್ಟ್ರಿ ಆಫ್ ಇಂಡಿಯಾ (ಅಸೋಚಾಮ್) ಆಯೋಜಿಸಿದ್ದ ಉಪನ್ಯಾಸ ಕಾರ್ಯಕ್ರಮದಲ್ಲಿ ಮಾತನಾಡಿದ ದೋವಲ್, ನೇತಾಜಿ ಅವರು ಮಹಾತ್ಮ ಗಾಂಧೀಜಿ ಅವರಿಗೆ ಸವಾಲು ಹಾಕುವ ದಿಟ್ಟತನ ಹೊಂದಿದ್ದರು. ಹಾಗಿದ್ದೂ ಅವರು ರಾಜೀನಾಮೆ ನೀಡಿ, ಕಾಂಗ್ರೆಸ್‌ನಿದ ಹೊರಬಂದು, ಸ್ವಾತಂತ್ರ್ಯಕ್ಕಾಗಿ ಹೋರಾಟವನ್ನು ಹೊಸದಾಗಿ ಪ್ರಾರಂಭಿಸಿದರು.
ನೇತಾಜಿ ಅವರನ್ನು ಆ ವೇಳೆಯಲ್ಲಿ ಜಪಾನ್ ಹೊರತುಪಡಿಸಿ ಬೇರೆ ಯಾವುದೇ ದೇಶ ಬೆಂಬಲಿಸಲಿಲ್ಲ. ನಾನು ಬ್ರಿಟಿಷರ ವಿರುದ್ಧ ಹೋರಾಡುತ್ತೇನೆ. ನಾನು ಸ್ವಾತಂತ್ರ್ಯಕ್ಕಾಗಿ ಭಿಕ್ಷೆ ಬೇಡುವುದಿಲ್ಲ. ಅದು ನನ್ನ ಹಕ್ಕು ಮತ್ತು ನಾನು ಅದನ್ನು ಪಡೆಯಬೇಕು ಎನ್ನುವುದು ಬೋಸ್ ಅವರ ದಿಟ್ಟ ನಿಲುವಾಗಿತ್ತು. ಬೋಸ್ ಇದ್ದಿದ್ದರೆ ಭಾರತ ವಿಭಜನೆಯಾಗುತ್ತಿರಲಿಲ್ಲ ಎಂದು ಜಿನ್ನಾ ಕೂಡ ಹೇಳಿದ್ದರು ,” ಎಂದು ವಿವರಿಸಿದರು. ‘ಒಂದು ಪ್ರಶ್ನೆ ಮನಸ್ಸಿನಲ್ಲಿ ಆಗಾಗ ಬರುತ್ತದೆ. ಜೀವನದಲ್ಲಿ ನಮ್ಮ ಪ್ರಯತ್ನಗಳು ಮುಖ್ಯವೋ ಅಥವಾ ಫಲಿತಾಂಶವು ಮುಖ್ಯವೋ. ಬೋಸ್ ಅವರ ಮಹತ್ತರವಾದ ಪ್ರಯತ್ನಗಳನ್ನು ಯಾರೂ ಸಂದೇಹಿಸಲಾರರು. ಆದರೆ ಜನರು ಸಾಮಾನ್ಯವಾಗಿ ನೀವು ನೀಡುವ ಫಲಿತಾಂಶಗಳ ಮೂಲಕ ನಿಮ್ಮನ್ನು ನಿರ್ಣಯಿಸುತ್ತಾರೆ. ಹಾಗಾದರೆ ಬೋಸ್ ಅವರ ಪ್ರಯತ್ನ ವ್ಯರ್ಥವೇ?,” ಎಂದು ದೋವಲ್ ಸಭಿಕರನ್ನು ಪ್ರಶ್ನಿಸಿದರು. “ಸುಭಾಷ್ ಬೋಸ್ ಇದ್ದಿದ್ದರೆ ಭಾರತ ವಿಭಜನೆಯಾಗುತ್ತಿರಲಿಲ್ಲ. ನಾನು ಒಬ್ಬನೇ ಒಬ್ಬ ನಾಯಕನನ್ನು ಒಪ್ಪುತ್ತೇನೆ. ಅದು ಸುಭಾಷ್ ಚಂದ್ರ ಬೋಸ್ ಎಂದು ಜಿನ್ನಾ ಹೇಳಿದ್ದರು” ಎಂದು ತಿಳಿಸಿದ್ದಾರೆ.
