ಉದಯವಾಹಿನಿ, ರಾಯಚೂರು: ಹಾವು ಕಚ್ಚಿ ತಾಯಿ ಹಾಗೂ ಮಗ ಸಾವನ್ನಪ್ಪಿದ ದಾರುಣ ಘಟನೆ ದೇವದುರ್ಗ ತಾಲೂಕಿನ ಅಮರಾಪುರ ಗ್ರಾಮದಲ್ಲಿ ನಡೆದಿದೆ. ಮೃತ ದುರ್ದೈವಿಗಳನ್ನು ಸುಬ್ಬಮ್ಮ (35) ಹಾಗೂ ಬಸವರಾಜ (10) ಎಂದು ಗುರುತಿಸಲಾಗಿದೆ. ಭಾನುವಾರ ಸಂಜೆ ಜಮೀನಿನಲ್ಲಿ ಕೆಲಸ ಮುಗಿಸಿ ಮನೆಗೆ ಮರಳುವಾಗ ಹಾವು ಕಡಿದಿದೆ. ಮನೆಗೆ ಬರುತ್ತಿದ್ದಂತೆ ಇಬ್ಬರಿಗೂ ಆರೋಗ್ಯದಲ್ಲಿ ಏರುಪೇರಾಗಿದೆ. ಕೂಡಲೇ ಕುಟುಂಬಸ್ಥರು ಇಬ್ಬರನ್ನೂ ಆಸ್ಪತ್ರೆಗೆ ಕರೆದೊಯ್ಯುವ ಪ್ರಯತ್ನ ಮಾಡಿದ್ದಾರೆ. ಆದರೆ ಮಾರ್ಗ ಮಧ್ಯೆದಲ್ಲೇ ತಾಯಿ ಮಗ ಸಾವನ್ನಪ್ಪಿದ್ದಾರೆ. ಹೆರುಂಡಿ ಗ್ರಾಮದ ಕುಟುಂಬ ಕೂಲಿ ಕೆಲಸಕ್ಕಾಗಿ ಅಮರಾಪುರ ಗ್ರಾಮದಲ್ಲಿ ನೆಲೆಸಿತ್ತು. ಎಂದಿನಂತೆ ಕೃಷಿ ಕೆಲಸಕ್ಕೆ ತೆರಳಿದ್ದಾಗ ಈ ಅವಘಡ ಸಂಭವಿಸಿದೆ. ಮೃತರ ಕುಟುಂಬಸ್ಥರ ಆಕ್ರಂದನ ಮುಗಿಲುಮುಟ್ಟಿದೆ.
