ಉದಯವಾಹಿನಿ, ಬೆಂಗಳೂರು: ಗ್ರೇಟರ್‌ ಬೆಂಗಳೂರಿಗಾಗಿ ಬಿಬಿಎಂಪಿಯನ್ನು ಈಗಿರುವ ವ್ಯಾಪ್ತಿಯಲ್ಲೇ ಸಮಾನಂತರವಾಗಿ ವಿಭಜಿಸಲು ಅಂತಿಮ ವರದಿ ಸಲ್ಲಿಕೆಯಾಗಿದೆ ಎಂದು ಬೆಂಗಳೂರು ನಗರಾಭಿವೃದ್ಧಿ ಸಚಿವರೂ ಆಗಿರುವ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ತಿಳಿಸಿದ್ದಾರೆ. ಗ್ರೇಟರ್‌ ಬೆಂಗಳೂರು ಪ್ರಾಧಿಕಾರದ ರಚನಾ ಸಮಿತಿ ಅಧ್ಯಕ್ಷ ರಿಜ್ವಾನ್‌ ಅರ್ಷದ್‌ ಅವರು ಇಂದು ಅಂತಿಮ ವರದಿಯನ್ನು ಸಲ್ಲಿಸಿದ್ದಾರೆ. ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಡಿ.ಕೆ.ಶಿವಕುಮಾರ್‌, ಗ್ರೇಟರ್‌ ಬೆಂಗಳೂರಿಗೆ ಮತ್ತಷ್ಟು ಪ್ರದೇಶಗಳನ್ನು ಮುಂದಿನ ದಿನಗಳಲ್ಲಿ ಸೇರಿಸಲಾಗುವುದು. ಸದ್ಯಕ್ಕೆ ಯಾವುದೇ ಹೊಸ ಪ್ರದೇಶಗಳ ಸೇರ್ಪಡೆಯಿಲ್ಲದೆ ಸಮಾನಂತರವಾಗಿ ಬಿಬಿಎಂಪಿಯನ್ನು ಗ್ರೇಟರ್‌ ಬೆಂಗಳೂರನ್ನಾಗಿ ರಚಿಸಿ ಚುನಾವಣೆ ನಡೆಸುವುದಾಗಿ ತಿಳಿಸಿದರು.ಎತ್ತಿನಹೊಳೆ ಯೋಜನೆ ಕುರಿತು ತುಮಕೂರು ಜಿಲ್ಲಾ ಉಸ್ತುವಾರಿ ಸಚಿವರೂ ಆಗಿರುವ ಗೃಹಸಚಿವ ಡಾ.ಜಿ.ಪರಮೇಶ್ವರ್‌ ತಮೊಂದಿಗೆ ಚರ್ಚೆ ನಡೆಸಿದ್ದಾರೆ. ಅವರ ಸ್ವಕ್ಷೇತ್ರ ಕೊರಟಗೆರೆಯಲ್ಲಿ ಯೋಜನೆ ಕೈಗೊಳ್ಳಬೇಕೆಂಬುದು ಅವರ ಬೇಡಿಕೆಯಾಗಿದೆ. ನೈಸರ್ಗಿಕವಾಗಿ ಇಲ್ಲಿನ ನೀರಿನ ಹರಿವಿದೆ. ಹೀಗಾಗಿ ಅವರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳುವುದು ಅನಿವಾರ್ಯ ಎಂದರು.
ನೀರಿನ ಸಂಗ್ರಹಕ್ಕೆ ಎರಡುಮೂರು ಕೆರೆಗಳನ್ನು ಸೂಚಿಸಿದ್ದಾರೆ. ಅವು 150 ಅಡಿಯಷ್ಟು ಆಳ ಇವೆ. ಅಲ್ಲಿಂದ ಲಿಫ್‌್ಟ ಇರಿಗೇಷನ್‌ ಮೂಲಕ ನೀರನ್ನು ಹೊರ ಎತ್ತಬೇಕು. ಈ ಎಲ್ಲ ವಿಚಾರಗಳನ್ನು ಪರಮೇಶ್ವರ್‌ ಅವರೊಂದಿಗೆ ಚರ್ಚಿಸಲಾಗಿದೆ ಎಂದು ತಿಳಿಸಿದರು. ನಾಳೆ ತಾವು ದೆಹಲಿಗೆ ತೆರಳುತ್ತಿದ್ದು ಎತ್ತಿನಹೊಳೆ ಯೋಜನೆಗೆ ಸಂಬಂಧಪಟ್ಟಂತೆ ತುಮಕೂರು ಮತ್ತು ಹಾಸನದಲ್ಲಿನ ಕಾಮಗಾರಿಗೆ ಕೇಂದ್ರ ಅರಣ್ಯ ಇಲಾಖೆಯ ಅನುಮತಿಗಾಗಿ ಕೇಂದ್ರ ಸಚಿವರನ್ನು ಭೇಟಿಯಾಗಲಿದ್ದೇನೆ. ಜೊತೆಗೆ ಕೇಂದ್ರ ಜಲಶಕ್ತಿ ಸಚಿವರ ಜೊತೆಗೂ ಚರ್ಚಿಸುವುದಾಗಿ ಹೇಳಿದರು. ಈ ವೇಳೆ ಪಕ್ಷದ ಕಚೇರಿಗೆ ಭೇಟಿ ನೀಡಿ ಹೈಕಮಾಂಡ್‌ ನಾಯಕರೊಂದಿಗೆ ಸಮಾಲೋಚನೆ ನಡೆಸುವುದು ರೂಢಿಸಂಪ್ರದಾಯ ಎಂದರು. ಡಿ.ಕೆ.ಶಿವಕುಮಾರ್‌ ಸಿಎಂ ಆಗಬೇಕೆಂದು ರಂಭಾಪುರಿ ಶ್ರೀಗಳು ನೀಡಿರುವ ಹೇಳಿಕೆಗೆ ಪ್ರತಿಕ್ರಿಯಿಸಲು ಡಿಸಿಎಂ ನಿರಾಕರಿಸಿದರು.

Leave a Reply

Your email address will not be published. Required fields are marked *

error: Content is protected !!