ಉದಯವಾಹಿನಿ, ರಿಯೊ ಡಿ ಜನೈರೊ: ವೈಯಕ್ತಿಕ ಅಥವಾ ರಾಜಕೀಯ ಲಾಭಕ್ಕಾಗಿ ಭಯೋತ್ಪಾದನೆಯನ್ನು ಮೌನವಾಗಿ ಬೆಂಬಲಿಸುವುದು ತಪ್ಪು ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಪಾಕ್ ಹಾಗೂ ಚೀನಾ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಬ್ರೆಜಿಲ್‌ನ ರಿಯೊ ಡಿ ಜನೈರೊದಲ್ಲಿ ನಡೆದ 17 ನೇ ಬ್ರಿಕ್ಸ್ ಶೃಂಗಸಭೆಯಲ್ಲಿ ಮೋದಿ ಪಾಕಿಸ್ತಾನ, ಚೀನಾವನ್ನು ಹೆಸರಿಸದೆ ಎರಡೂ ದೇಶಗಳನ್ನು ಟೀಕಿಸಿದರು.ಭಯೋತ್ಪಾದನೆಯನ್ನು ಖಂಡಿಸುವುದು ನಮ್ಮ ತತ್ವವಾಗಬೇಕು, ಕೇವಲ ಅನುಕೂಲಕ್ಕಾಗಿ ಅಲ್ಲ, ಯಾವ ದೇಶದ ಮೇಲೆ ದಾಳಿ ನಡೆದಿದೆ, ಯಾರು ಮಾಡಿದ್ದಾರೆಂದು ನೋಡುತ್ತಾ ಹೋದರೆ ಅದು ಮಾನವೀಯತೆಗೆ ಮಾಡಿದ ದ್ರೋಹವಾಗುತ್ತದೆ ಎಂದಿದ್ದಾರೆ. ಭಯೋತ್ಪಾದಕರ ವಿರುದ್ಧ ನಿರ್ಬಂಧಗಳನ್ನು ವಿಧಿಸುವಲ್ಲಿ ಯಾವುದೇ ಹಿಂಜರಿಕೆ ಬೇಡ. ಭಯೋತ್ಪಾದನೆಗೆ ಸಂಬಂಧಿಸಿದಂತೆ ಮಾತು ಮತ್ತು ಕ್ರಿಯೆಯ ನಡುವೆ ಯಾವುದೇ ವ್ಯತ್ಯಾಸ ಇರಬಾರದು ಎಂದ ಅವರು ಜಗತ್ತಿನಲ್ಲಿ ನಡೆಯುತ್ತಿರುವ ಸಂಘರ್ಷ ಗಳ ಬಗ್ಗೆ ಕಳವಳ ವ್ಯಕ್ತಪಡಿಸಿದರು.ಪಶ್ಚಿಮ ಏಷ್ಯಾದಿಂದ ಯುರೋಪ್ ವರೆಗೆ ಜಗತ್ತಿನಲ್ಲಿ ನಡೆಯುತ್ತಿರುವ ಸಂಘರ್ಷಗಳು ಮತ್ತು ಉದ್ವಿಗ್ನತೆಗಳ ಬಗ್ಗೆ ಪ್ರಧಾನಿ ಪ್ರಸ್ತಾಪಿಸಿದರು. ಗಾಜಾದಲ್ಲಿನ ಮಾನವೀಯ ಪರಿಸ್ಥಿತಿಯ ಬಗ್ಗೆಯೂ ಅವರು ಕಳವಳ ವ್ಯಕ್ತಪಡಿಸಿದರು. ಶಾಂತಿಯ ಮಾರ್ಗವೇ ಏಕೈಕ ಆಯ್ಕೆ ಎಂದು ಭಾರತ ನಂಬುತ್ತದೆ ಎಂದು ಅವರು ಹೇಳಿದರು.
ಜಗತ್ತನ್ನು ವಿಭಜನೆ ಮತ್ತು ಸಂಘರ್ಷದಿಂದ ದೂರವಿಡುವ ಮಾತುಕತೆ, ಸಹಕಾರ ಮತ್ತು ಸಮನ್ವಯದತ್ತ ಸಾಗುವ ಮತ್ತು ಒಗ್ಗಟ್ಟು ಮತ್ತು ವಿಶ್ವಾಸವನ್ನು ಹೆಚ್ಚಿಸುವ ಪ್ರತಿಯೊಂದು ಪ್ರಯತ್ನಕ್ಕೂ ಭಾರತ ಬೆಂಬಲ ನೀಡುತ್ತದೆ ಎಂದು ಅವರು ಹೇಳಿದರು.ಏ.22 ರಂದು ಪಹಲ್ಗಾಮ್‌ನಲ್ಲಿ ನಡೆದ ಭಯೋತ್ಪಾದಕ ದಾಳಿಯನ್ನು ಅವರು ಉಲ್ಲೇಖಿಸಿದರು. ಈ ದಾಳಿ ಭಾರತದ ಆತ್ಮ, ಗುರುತು ಮತ್ತು ಗೌರವದ ಮೇಲಿನ ನೇರ ದಾಳಿ ಎಂದು ಪ್ರಧಾನಿ ಹೇಳಿದರು. ಇದು ಕೇವಲ ಭಾರತದ ಮೇಲಿನ ದಾಳಿಯಲ್ಲ, ಇಡೀ ಮಾನವೀಯತೆಯ ಮೇಲಿನ ದಾಳಿಯಾಗಿದೆ. ಈ ಕಷ್ಟದ ಸಮಯದಲ್ಲಿ ಭಾರತವನ್ನು ಬೆಂಬಲಿಸಿದ ದೇಶಗಳಿಗೆ ಧನ್ಯವಾದ ಅರ್ಪಿಸಿದರು.ಭಾರತ ಭಯೋತ್ಪಾದನೆಯ ಬಲಿಪಶು ರಾಷ್ಟ್ರವಾಗಿದ್ದರೆ, ಪಾಕಿಸ್ತಾನ ಅದರ ಬೆಂಬಲಿಗ ರಾಷ್ಟ್ರವಾಗಿದೆ ಎಂದು ಬ್ರಿಕ್‌್ಸ ಶೃಂಗಸಭೆಯಲ್ಲಿ ವಿಶ್ವ ನಾಯಕರಿಗೆ ಮನವರಿಕೆ ಮಾಡಿಕೊಟ್ಟ ಪ್ರಧಾನಿ ಮೋದಿ, ಬಲಿಪಶುಗಳು ಮತ್ತು ಬೆಂಬಲಿಗರನ್ನು ಒಂದೇ ತಕ್ಕಡಿಯಲ್ಲಿ ತೂಗಲು ಸಾಧ್ಯವಿಲ್ಲ ಎಂದು ಒತ್ತಿ ಹೇಳಿದ್ದಾರೆ.
