ಉದಯವಾಹಿನಿ, ಕಾಪು : ಮಜೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಮಜೂರು ಪರಿಸರದ 8 ಬಾವಿಗಳ ನೀರು ಕಲುಷಿತಗೊಂಡು ಬಣ್ಣ ಬದಲಾಗಿ ದುರ್ವಾಸನೆ ಬರುತ್ತಿದ್ದು, ಸ್ಥಳೀಯರು ಆತಂಕಗೊಂಡಿದ್ದಾರೆ.
ಇಲ್ಲಿನ ಉಮ್ಮರ್ ಸಾಹೇಬ್, ಅಮಣಿ ಪಾಣಾರ, ಸಂಕ್ರಾಯ ಆಚಾರ್ಯ, ರುಕ್ಕಿಣಿ ಭಟ್, ಮಾಲಿನಿ ರಾವ್, ಸೂರ್ಯ ಮೇಸ್ತ್ರಿ, ಸುಬ್ರಾಯ ಭಟ್, ಹಯವದನ ಪುರಾಣಿಕ್, ಸಂಜೀವ ದೇವಾಡಿಗ, ಹರಿದಾಸ್ ಭಟ್ ಅವರ ಮನೆಯ ಬಾವಿ ನೀರು ಸಂಪೂರ್ಣ ಕಲುಷಿತಗೊಂಡಿದೆ.
ಕಲುಷಿತಗೊಂಡಿರುವ ನೀರು ಕುಡಿಯುವುದಕ್ಕೆ, ದಿನಬಳಕೆಗೆ ಬಳಸುವುದೂ ಕಷ್ಟಸಾಧ್ಯವಾಗಿದೆ. ಆದ್ದರಿಂದ ಈ ಮನೆಯವರೂ ಪಕ್ಕದಲ್ಲೇ ಇರುವ ಬಾವಿ ನೀರನ್ನು ಕುಡಿಯುವುದಕ್ಕೆ ಮತ್ತು ಗ್ರಾಮ ಪಂಚಾಯಿತಿ ನೀಡುವ ನಳ್ಳಿ ನೀರನ್ನು ಇತರ ಉದ್ದೇಶಗಳಿಗೆ ಪರ್ಯಾಯವಾಗಿ ಬಳಸುತ್ತಿದ್ದಾರೆ.
‘ಹತ್ತು ವರ್ಷದಿಂದ ಇಲ್ಲಿ ವಾಸವಿದ್ದೇವೆ. ಇದೇ ಮೊದಲ ಬಾರಿಗೆ ನಮ್ಮ ಬಾವಿ ನೀರು ಕಲುಷಿತಗೊಂಡಿದೆ. ನೀರು ಸಂಪೂರ್ಣ ಕೆಂಪಾಗಿದ್ದು, ಗಬ್ಬು ವಾಸನೆ ಬರುತ್ತಿದೆ. ಮಳೆಗಾಲ ಆರಂಭಗೊಂಡ ಬಳಿಕ ಸಮಸ್ಯೆ ತಲೆ ದೋರಿದೆ’ ಎಂದು ಸ್ಥಳೀಯ ನಿವಾಸಿ ಜನಾರ್ದನ ರಾವ್ ತಿಳಿಸಿದ್ದಾರೆ.

ಸಾರ್ವಜನಿಕ ದೂರಿನ ಹಿನ್ನೆಲೆಯಲ್ಲಿ 6 ಮನೆಗಳಿಂದ ನೀರನ್ನು ಸಂಗ್ರಹಿಸಿ ಪ್ರಯೋಗಾಲಯಕ್ಕೆ ರವಾನಿಸಲಾಗಿದ್ದು, 2 ಬಾವಿಗಳ ನೀರು ಕುಡಿಯುವುದಕ್ಕೆ ಯೋಗ್ಯವಾಗಿಲ್ಲ ಎಂಬ ವರದಿ ಸಿಕ್ಕಿದೆ. ಮತ್ತೆರಡು ಬಾವಿಯ ನೀರು ಕಲುಷಿತಗೊಂಡಿರುವ ಬಗ್ಗೆ ಮಾಹಿತಿ ಲಭಿಸಿರುವುದರಿಂದ ಅಲ್ಲಿಯ ನೀರನ್ನೂ ಪರೀಕ್ಷೆಗಾಗಿ ರವಾನಿಸಲಾಗಿದೆ ಎಂದು ಮಜೂರು ಗ್ರಾಮ ಪಂಚಾಯಿತಿ ಅಧ್ಯಕ್ಷ ಪ್ರಸಾದ್ ಶೆಟ್ಟಿ ವಳದೂರು ತಿಳಿಸಿದ್ದಾರೆ.ಮಜೂರು ವಿಷ್ಣುಮೂರ್ತಿ ದೇವಸ್ಥಾನದ ಸುತ್ತಮುತ್ತಲಿನ ಹಲವು ಮನೆಗಳ ನೀರು ಕಲುಷಿತಗೊಂಡಿರುವ ಬಗ್ಗೆ ಸ್ಥಳಕ್ಕೆ ಶಾಸಕ ಗುರ್ಮೆ ಸುರೇಶ್ ಶೆಟ್ಟಿ ಅವರು ಸೋಮವಾರ ಇಲಾಖಾಧಿಕಾರಿಗಳೊಂದಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ನೀರು ಮಣ್ಣಿನ ಪರೀಕ್ಷೆ ನಡೆಸಿ ಕಲುಷಿತಗೊಳ್ಳಲು ಕಾರಣವಾದ ಅಂಶಗಳನ್ನು ಶೀಘ್ರ ಪತ್ತೆಹಚ್ಚಬೇಕು ಮತ್ತು ಪರಿಹಾರಕ್ಕೆ ಕ್ರಮ ಕೈಗೊಳ್ಳಬೇಕು. ಕುಡಿಯುವ ನೀರಿಗೆ ಪರ್ಯಾಯ ವ್ಯವಸ್ಥೆ ಮಾಡಿಕೊಡುವಂತೆ ಇಲಾಖಾಧಿಕಾರಿಗಳಿಗೆ ಶಾಸಕರು ಸೂಚಿಸಿದರು. ಮಜೂರು ಗ್ರಾಮ ಪಂಚಾಯಿತಿ ಉಪಾಧ್ಯಕ್ಷೆ ಮಂಜುಳಾ ಆಚಾರ್ಯ ತಹಶೀಲ್ದಾರ್ ಪ್ರತಿಭಾ ಆರ್ ಗೌಂಡ್ ವಾಟರ್ ಹಾಗೂ ಪೊಲ್ಯುಷನ್ ಬೋರ್ಡ್ ಅಧಿಕಾರಿಗಳು ಪಂಜಾಯಿತಿ ಅಭಿವೃದ್ಧಿ ಅಧಿಕಾರಿಗಳು ಗ್ರಾ.ಪಂ. ಸದಸ್ಯರು ಜೊತೆಗಿದ್ದರು.

Leave a Reply

Your email address will not be published. Required fields are marked *

error: Content is protected !!