ಉದಯವಾಹಿನಿ, ಹಾವೇರಿ: ‘ಸ್ವಾತಂತ್ರ್ಯ, ಸಮಾನತೆ, ಪ್ರಜಾಪ್ರಭುತ್ವದ ಉಳಿವಿಗಾಗಿ ಹಾಗೂ ಭ್ರಷ್ಟಾಚಾರ ಮುಕ್ತ, ಪಾರದರ್ಶಕ, ಜನಪರ ಆಡಳಿತಕ್ಕಾಗಿ ಸ್ವಚ್ಛ ವಿಧಾನಸಭೆ ಅಭಿಯಾನ’ ಹೆಸರಿನಡಿ ಎಂಜಿನಿಯರ್ ನಾಗರಾಜ ಶಿ. ಕಲಕುಟಗರ ಎಂಬುವವರು ರಾಜ್ಯಾದ್ಯಂತ ಪಾದಯಾತ್ರೆ ಹಮ್ಮಿಕೊಂಡಿದ್ದು, ಹಾವೇರಿಗೂ ಗುರುವಾರ ಭೇಟಿ ನೀಡಿದರು.
ಬಾಗಲಕೋಟೆಯ ನಾಗರಾಜ, 2023ರ ವಿಧಾನಸಭೆ ಹಾಗೂ ಲೋಕಸಭೆ ಚುನಾವಣೆಗೆ ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧಿಸಿ ಪರಾಭವಗೊಂಡಿದ್ದಾರೆ. ಚುನಾವಣೆ ಸಂದರ್ಭದಲ್ಲಿ ನಡೆದ ಭ್ರಷ್ಟಾಚಾರ, ಜಾತಿ ವ್ಯವಸ್ಥೆ, ಕೋಮು ಸೌಹಾರ್ದಕ್ಕೆ ಧಕ್ಕೆ ಹಾಗೂ ಮತದಾರರಿಗೆ ಒಡ್ಡುವ ಆಮಿಷಗಳನ್ನು ನೋಡಿ ಬೇಸತ್ತಿದ್ದ ಅವರು, ಪ್ರಜಾಪ್ರಭುತ್ವದ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸಲು ಇದೀಗ ಪಾದಯಾತ್ರೆ ಹಮ್ಮಿಕೊಂಡಿದ್ದಾರೆ.
‘ಭ್ರಷ್ಟರಲ್ಲದ, ಕೋಮುವಾದಿಯಲ್ಲದ ಪ್ರಬುದ್ಧ-ಜನಪರ-ಸುಸಂಸ್ಕೃತ ವ್ಯಕ್ತಿತ್ವವುಳ್ಳವರು ಬೇಕಾಗಿದ್ದಾರೆ’ ಎಂಬ ಫಲಕ ಹಿಡಿದುಕೊಂಡು ಸಾಗುತ್ತಿದ್ದಾರೆ. ಕರ್ನಾಟಕ ಹಾಗೂ ಭಾರತದ ಬಾವುಟವನ್ನೂ ಜೊತೆಗೆ ಕೊಂಡೊಯ್ಯುತ್ತಿದ್ದಾರೆ. ಈ ಪಾದಯಾತ್ರೆಗಾಗಿ ನಾಗರಾಜ ತಮ್ಮ ಕೆಲಸಕ್ಕೂ ರಾಜೀನಾಮೆ ನೀಡಿದ್ದಾರೆ. ಸ್ವಂತ ಖರ್ಚಿನಲ್ಲಿಯೇ ರಾಜ್ಯದ ಪ್ರತಿಯೊಬ್ಬ ಜನರನ್ನು ತಲುಪಬೇಕೆಂಬ ಉದ್ದೇಶ ಅವರದ್ದಾಗಿದೆ.
ಪಾದಯಾತ್ರೆ ಸಂದರ್ಭದಲ್ಲಿ ‘ಪ್ರಜಾವಾಣಿ’ ಜೊತೆ ಮಾತನಾಡಿದ ಅವರು, ‘ಆಡಳಿತದಲ್ಲಿ ಭ್ರಷ್ಟಾಚಾರ, ಕೋಮವಾದ, ಜಾತಿ ವ್ಯವಸ್ಥೆ ಮಿತಿಮೀರಿದೆ. ಅಪರಾಧಿಗಳ ಕೈಗೆ ಆಡಳಿತ ಸಿಗುತ್ತಿದೆ. ಪ್ರಜಾಪ್ರಭುತ್ವವನ್ನು ಉಳಿಸುವ ಕೆಲಸವಾಗಬೇಕಿದೆ. ಇದಕ್ಕಾಗಿ ಜನರನ್ನು ಎಚ್ಚರಿಸಲು ನಾನು ಪಾದಯಾತ್ರೆ ಹೊರಟಿದ್ದೇನೆ’ ಎಂದರು.

Leave a Reply

Your email address will not be published. Required fields are marked *

error: Content is protected !!