ಉದಯವಾಹಿನಿ, ರಟ್ಟಿಹಳ್ಳಿ: ‘ತಾಲ್ಲೂಕಿನ ಶಿರಗಂಬಿ, ಹೊಸಳ್ಳಿ, ಹಿರೇಮೊರಬ ಗ್ರಾಮಗಳ ಬಳಿ ತುಂಗಾ ಮೇಲ್ದಂಡೆ ಯೋಜನೆ ಮುಖ್ಯ ಕಾಲುವೆ ದುರಸ್ತಿ ಕಾರ್ಯ ಸುಮಾರು 15 ಕೋಟಿ ವೆಚ್ಚದಲ್ಲಿ ನಡೆಯುತ್ತಿದ್ದು, ಕಾಮಗಾರಿ ಸಂಪೂರ್ಣ ಕಳಪೆಯಾಗಿದೆ. ನೀರಾವರಿ ಇಲಾಖೆ ಅಧಿಕಾರಿಗಳು ಭ್ರಷ್ಟಾಚಾರದಲ್ಲಿ ತೊಡಗಿದ್ದಾರೆ’ ಎಂದು ಮಾಜಿ ಕೃಷಿ ಸಚಿವ ಬಿ.ಸಿ.ಪಾಟೀಲ ಆರೋಪ ಮಾಡಿದರು.
ಪಟ್ಟಣದ ಪ್ರವಾಸಿ ಮಂದಿರದಲ್ಲಿ ಗುರುವಾರ ಸುದ್ದಿಗೋಷ್ಠಿ ನಡೆಸಿ ಮಾತಾಡಿದ ಅವರು, ಶಿರಗಂಬಿ, ಹೊಸಳ್ಳಿ ಗ್ರಾಮದ ಬಳಿ ತುಂಗಾ ಮೇಲ್ದಂಡೆ ಮುಖ್ಯ ಕಾಲುವೆ ದುರಸ್ತಿ ಕಾಮಗಾರಿ ಸ್ಥಳ ಪರಿಶೀಲನೆ ಮಾಡಿದ್ದು, ಜಂಗಲ್ ಕಟಾವ್ ಸರಿಯಾಗಿ ಮಾಡಿರುವುದಿಲ್ಲ. ಕೆಲವೊಂದು ಕಡೆಗಳಲ್ಲಿ ಜಂಗಲ್ ಕಟಾವ್ ಮಾಡಿ ಕಾಲುವೆಗೆ ಹಾಕಲಾಗಿದೆ. 4 ಇಂಚಿನಷ್ಟು ಲೈನಿಂಗ್ ಹಾಕಬೇಕಾಗಿದ್ದು, 2 ಇಂಚಿನಷ್ಟು ಮಾತ್ರ ಹಾಕಲಾಗಿದೆ. ಕಾಮಗಾರಿಯಲ್ಲಿ ಸರ್ಕಾರದ ಶೇ 80ರಷ್ಟು ಹಣ ಪೋಲಾಗುತ್ತಿದ್ದು, ಕೇವಲ ₹2 ಕೋಟಿಯಲ್ಲಿ ಪೂರ್ಣಗೊಳ್ಳುವ ಕಾಮಗಾರಿಗೆ ₹5 ಕೋಟಿ ವೆಚ್ಚವಾಗುತ್ತಿದೆ.
ಮಳೆಗಾಲ ಇರುವ ಕಾರಣ ಕಾಲುವೆ ದುರಸ್ತಿಗೆ ಸರಿಯಾದ ಸಮಯವಲ್ಲ. ಅಲ್ಲದೆ ಜುಲೈ-15 ರಂದು ಕಾಲುವೆಗೆ ನೀರು ಹರಿಸುತ್ತಿದ್ದು, 4ರಿಂದ 5 ದಿನಗಳಲ್ಲಿ ತಾಲ್ಲೂಕಿಗೆ ನೀರು ಹರಿದು ಬರುವ ಕಾರಣ ಲೈನಿಂಗ್ ಮಾಡಿದ ಕಾಮಗಾರಿ ಸಂಪೂರ್ಣ ಹಾಳಾಗಿ ಹೋಗುತ್ತದೆ. ಈ ಬಗ್ಗೆ ಮುಖ್ಯ ಇಂಜಿನೀಯರ ಗಮನಕ್ಕೆ ತರಲಾಗಿದ್ದು, ಕಾಮಗಾರಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ಮಾಡಲಾಗುವುದು ಅಲ್ಲಿಯವರೆಗೆ ಕಾಮಗಾರಿ ನಿಲ್ಲಿಸುವಂತೆ ತಿಳಿಸಿದ್ದಾರೆ. ಈ ವೇಳೆ ಮುಖಂಡರಾದ ದೇವರಾಜ ನಾಗಣ್ಣನವರ, ಶಂಭಣ್ಣ ಗೂಳಪ್ಪನವರ, ಪರಮೇಶಪ್ಪ ಹಲಗೇರಿ, ಗಣೇಶ ವರ್ಣೇಕರ, ಮಾಲತೇಶ ಬೆಳಕೇರಿ, ಹನುಮಂತಪ್ಪ ಗಾಜೇರ, ಸುಶೀಲ ನಾಡಗೇರ, ಶಿವು ಉಪ್ಪಾರ, ಗಣೇಶ ಅಮ್ಮನಿ, ಪ್ರಶಾಂತ ಮಾಳಗಿ, ಸಿದ್ದಪ್ಪ ಹರಿಜನ, ರಾಘವೇಂದ್ರ ಹರವಿಶೆಟ್ಟರ, ಪ್ರಕಾಶ ಕೊರವರ, ರುದ್ರಪ್ಪ ಬೆನ್ನೂರ ಇದ್ದರು.

Leave a Reply

Your email address will not be published. Required fields are marked *

error: Content is protected !!