ಉದಯವಾಹಿನಿ, ಬಳ್ಳಾರಿ : ಸಿಎಂ ಬದಲಾವಣೆ ಬಗ್ಗೆ ಸುದ್ದಿಗಳು ಹರಿದಾಡುತ್ತಿವೆ. ಮೈಲಾರಲಿಂಗೇಶ್ವರ ಕಾರ್ಣಿಕ ಭವಿಷ್ಯ ಹೊರಬಿದ್ದಿದ್ದು, ‘ತುಂಬಿದ ಕೊಡ ತುಳಕಿತಲೇ ಪರಾಕ್’ ಎಂದು ಗೊರವಯ್ಯ ಭವಿಷ್ಯ ನುಡಿದಿದ್ದಾರೆ. ಜಿಲ್ಲೆಯ ಹೂವಿನಹಡಗಲಿ ತಾಲ್ಲೂಕಿನಲ್ಲಿ ಮೈಲಾರಲಿಂಗೇಶ್ವರ ಕಾರ್ಣಿಕದಲ್ಲಿ ಗೊರವಯ್ಯ ನುಡಿದ ನುಡಿಯನ್ನು ದೇವಸ್ಥಾನದ ಧರ್ಮಕರ್ತರಾದ ವೆಂಕಪ್ಪಯ್ಯ ಒಡೆಯರ್ ವಿಶ್ಲೇಷಣೆ ಮಾಡಿದರು. ತುಂಬಿದ ಕೊಡ ಎಂದರೆ ಈ ಬಾರಿ ಮೈಲಾರಲಿಂಗೇಶ್ವರ ಶುಭ ಸುದ್ದಿ ನೀಡಿದ್ದಾರೆ ಎಂಬ ಭಾವನೆ ಎಲ್ಲರಲ್ಲೂ ಮೂಡಿದೆ. ಎಲ್ಲೆಡೆ ಹೆಚ್ಚುವರಿ ಮಳೆಯಾಗಲಿದೆ. ನದಿಗಳು, ಹಳ್ಳ-ಕೊಳ್ಳಗಳು ತುಂಬಿ ತುಳುಕಲಿವೆ. ಎಲ್ಲಾ ಜೀವಾತ್ಮಗಳಿಗೂ ನೀರು ಸಮೃದ್ಧಿಯಾಗಿರುತ್ತೆ ಎಂಬುದು ಕಾರ್ಣಿಕ ನುಡಿಯ ಅರ್ಥ” ಎಂದು ಹೇಳಿದರು.”ತುಂಬಿದ ಕೊಡ ಎಂದರೆ ಸಮೃದ್ಧಿ. ತುಳುಕುತ್ತೆ ಎಂದರೆ ಶಾಸಕರ ಮನಸ್ಸಿನಲ್ಲಿ ಏನಾದ್ರೂ ಏರುಪೇರಾದರೆ ಬದಲಾಗಬಹುದು.
ಡಿ.ಕೆ.ಶಿ ಅವರಿಗೆ ದೋಷವಿತ್ತೇ ಎಂಬ ಮಾಧ್ಯಮದವರ ಪ್ರಶ್ನೆಗೆ ಉತ್ತರಿಸಿದ ಅವರು, “ಮೈಲಾರಲಿಂಗೇಶ್ವರ ಸನ್ನಿದಾನಕ್ಕೆ ಬರುವಾಗ ಭಕ್ತಿಪೂರ್ವಕವಾಗಿ ನಡೆದುಕೊಂಡು ಬರಬೇಕು, ಹೆಲಿಕಾಪ್ಟರ್ ಮೂಲಕ ಬರಬಾರದು. ಅವರು ಹಾಗೆ ಬಂದಿದ್ದರಿಂದ ಕೆಲವು ವ್ಯತ್ಯಾಸಗಳಾಗುತ್ತವೆ ಎಂದು ಮೈಲಾರಲಿಂಗೇಶ್ವರ ಸನ್ನಿದಾನದಲ್ಲಿ ಹೇಳಲಾಗಿತ್ತು. ದೋಷ ಕಳೆದುಕೊಂಡು ಹೋಗಿದ್ದಾರೆ” ಎಂದು ತಿಳಿಸಿದರು.
ಡಿಕೆಶಿ ಏಕೆ ಸಿಎಂ ಆಗುತ್ತಿಲ್ಲ, ದೋಷ ಪರಿಹಾರ ಆಗಿಲ್ಲವೇ ಅಥವಾ ಬೇರೆ ಏನಾದ್ರೂ ಪೂಜೆ ಮಾಡಬೇಕೇ ಎಂಬ ಪ್ರಶ್ನೆಗೆ, “ಸಿಎಂ ಆಗುವುದು ಭಗವಂತನ ಇಚ್ಛೆಗೆ ಬಿಟ್ಟಿರುವುದು. ಭಗವಂತನ ಆಶೀರ್ವಾದ ಇದ್ದರೆ ಒಳ್ಳೆಯದಾಗಲಿ”ಎಂದಷ್ಟೇ ಹೇಳಿದರು. ಮುಂದುವರೆದು, “ಅವರು ತಮ್ಮ ದೋಷ ನಿವಾರಣೆಗಾಗಿ ಇಲ್ಲಿ ರುದ್ರಾಭಿಷೇಕ, ದೀರ್ಘ ದಂಡ ನಮಸ್ಕಾರ ಹಾಗೂ ಬೆಳ್ಳಿ ಹೆಲಿಕ್ಯಾಪ್ಟರ್ ಅನ್ನು ದೇಣಿಗೆಯಾಗಿ ಕೊಟ್ಟಿದ್ದಾರೆ” ಎಂದು ಇದೇ ಸಂದರ್ಭದಲ್ಲಿ ಮಾಹಿತಿ ನೀಡಿದರು.
